ಕಾರ್ಕಳ, ಆ 14 : ತಾಲೂಕು ವ್ಯಾಪ್ತಿಯಲ್ಲಿ ವಿವಿದೆಡೆಗಳಲ್ಲಿ ಆ. 13 ರ ಸೋಮವಾರ ತಡರಾತ್ರಿ ಬೀಸಿದ ಸುಂಟರುಗಾಳಿಗೆ ಲಕ್ಷಾಂತರ ಬೆಲೆಬಾಳುವ ಸೊತ್ತುಗಳು ಹಾನಿಗೊಳಗಾಗಿದೆ. ಕುಕ್ಕುಂದೂರು ಜಯಂತಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಂಚು ಸಂಪೂರ್ಣ ಹಾರಿ ಹೋಗಿದೆ. ಇದೇ ಪರಿಸರದಲ್ಲಿರುವ ಸುಮಾರು 70 ಕ್ಕೂ ಮಿಕ್ಕಿ ಮನೆಯಗಳ ಹೆಂಚು ಹಾರಿ ಹೋಗಿದೆ. ನಕ್ರೆ ಪರಿಸರದಲ್ಲಿ ಮರಗಳು ಧರೆಗುರುಳಿದೆ. 70ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು ಮುರಿದು ಬಿದ್ದು ತಂತಿಗಳು ತುಂಡರಿಸಿ ವಿದ್ಯುತ್ ಸಂಪರ್ಕ ಮೊಟಕು ಗೊಂಡಿದೆ.
ತೆಳ್ಳಾರು ಮಂಜ ನಿವಾಸಿ ಸಾಧು ಪೂಜಾರಿಯ ಮನೆ ಸಂಪೂರ್ಣ ಧರೆಗುಳಿರುಳಿದೆ. ಆ ಮನೆಯ 8 ಮಂದಿ ಕೂಲಿ ಕೆಲಸ ಮಾಡುತ್ತಿದ್ದು, ಅವರಿಗೆ ನೆರೆಮನೆಯವರು ಆಶ್ರಯ ನೀಡಿದ್ದಾರೆ. ಮುಡಾರು ಗ್ರಾಮದ ಗಾಂದುಗುಡ್ಡೆಯಲ್ಲಿ 8 ಮನೆ, ದಿಡಿಂಬಿರಿಯ 4 ಮನೆಯ ಹೆಂಚುಗಳು ಹಾನಿಗೊಳಗಾಗಿದೆ. ಶಂಕರ್ ಶೆಟ್ಟಿಯ ಮನೆ ಬಹುತೇಕ ಹಾನಿಗೊಳಗಾಗಿದೆ. ಇದೇ ಪರಿಸರದಲ್ಲಿ ಹಲವು ವಿದ್ಯುತ್ ಕಂಬಗಳು ಧರೆಗುರುಳಿ, ತಂತಿಗಳು ಮುರಿದು ಬಿದ್ದಿದ್ದುದರಿಂದ ವಿದ್ಯುತ್ ಸಂಪರ್ಕದಲ್ಲಿ ಮೊಟಕುಗೊಂಡಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಹಮ್ಮದ್ ಇಸಾಕ್, ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಆಂತೋನಿ, ಜಿಲ್ಲಾ ಪಂಚಾಯತ್ ಸದಸ್ಯ ಇರ್ವತ್ತೂರು ಉದಯ ಎಸ್.ಕೋಟ್ಯಾನ್, ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಕುಕ್ಕೂಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮನಾ ರಾವ್, ಉಪಾಧ್ಯಕ್ಷ ರಾಜೇಶ್ ರಾವ್, ಕಂದಾಯ ನಿರೀಕ್ಷಕರು, ಗ್ರಾಮಕರಣಿಗರು, ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತುರ್ತು ಪರಿಹಾರವನ್ನು ಘಟನಾ ಸ್ಥಳದಲ್ಲಿಯೇ ವಿತರಿಸಿದರು.