ಉಡುಪಿ, ಆ 14: ರಾಜ್ಯದಲ್ಲಿ ಆ.22ರಂದು ಆಚರಿಸುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದಂತೆ ಗೋ ಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ ಉಡುಪಿ ಜಿಲ್ಲೆ ಒತ್ತಾಯಿಸಿದೆ.
ಉಡುಪಿಯಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಹಬ್ಬದ ಸಂದರ್ಭ ನಡೆಯುವ ಅಕ್ರಮ ಗೋ ಸಾಗಾಟ ಹಾಗೂ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಆದೇಶ ನೀಡಿದೆ. ಕೋರ್ಟ್ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸರಕಾರ ರಚಿಸಿದೆ.ಸುಪ್ರಿಂ ಹಾಗೂ ಹೈಕೋರ್ಟ್ ಆದೇಶದ ಅನ್ವಯ ಗೋಹತ್ಯೆ ನಡೆಸುವುದು ಕಾನೂನು ಬಾಹಿರ. 12 ವರ್ಷದ ಒಳಗಿನ ಗೋವಂಶವನ್ನು ಲಿಖಿತ ಪರವಾನಿಗೆ ಇಲ್ಲದೆ ಹತ್ಯೆ ಮಾಡುವುದು ಜಿಲ್ಲಾಡಳಿತ ತಡೆಗಟ್ಟಬೇಕು . ಈ ಆದೇಶ ಉಲ್ಲಂಘಿಸಿದರೆ ಸರ್ಕಾರದ ವಿರುದ್ದ ನ್ಯಾಯಾಂಗ ನಿಂದನೆ ದೂರು ದಾಖಲಿಸುವುದಾಗಿ ವಿಹಿಂಪ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಮ್ಮ ನೇತೃತ್ವದ ಸಮಿತಿಯ ತುರ್ತುಸಭೆಯನ್ನು ಕರೆದು ಸಂಬಂಧ ಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಈ ಮೂಲಕ ಅಕ್ರಮ ಗೋಸಾಗಾಟ ಹಾಗೂ ಹತ್ಯೆಯನ್ನು ತಡೆಯಬೇಕು. ಈ ಸಂಬಂಧ ಆ.17ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬಜರಂಗದಳ ಮುಖಂಡ ಸುನೀಲ್ ಕೆ.ಆರ್., ವಿಎಚ್ ಪಿ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ, ದುರ್ಗಾ ವಾಹಿನಿಯ ಭಾಗ್ಯಶ್ರೀ ಐತಾಳ್ ಉಪಸ್ಥಿತರಿದ್ದರು.