ಬೆಳ್ತಂಗಡಿ, ಆ 14: ಧಾರ್ಮಿಕ ಕ್ಷೇತ್ರಗಳ ಭೇಟಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕುಟುಂಬ ಸಮೇತರಾಗಿ ಸೋಮವಾರ ರಾತ್ರಿ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು.
ಸಿಎಂ ಜತೆಗೆ ತಾಯಿ ಚೆನ್ನಮ್ಮ, ಪತ್ನಿ ಅನಿತಾ ಕುಮಾರಸ್ವಾಮಿ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ರಾತ್ರಿ 8.30 ರ ಹೊತ್ತಿಗೆ ಕಾರಿನಲ್ಲಿ ಧರ್ಮಸ್ಥಳಕ್ಕೆ ಬಂದ ಮುಖ್ಯಮಂತ್ರಿಗಳು ಸನ್ನಿಧಿ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದು ಬಟ್ಟೆ ಬದಲಾಯಿಸಿ 9.05 ಕ್ಕೆ ದೇವಳಕ್ಕೆ ಆಗಮಿಸಿದರು. ಈ ಸಂದರ್ಭ ಕ್ಷೇತ್ರದ ಸಂಪ್ರದಾಯದಂತೆ ಮುಖ್ಯಮಂತ್ರಿಗಳನ್ನು ವಾದ್ಯ ಮೇಳಗಳೊಂದಿಗೆ ಬರಮಾಡಿಕೊಳ್ಳಲಾಯಿತು.
ರಾತ್ರಿ 9.15ರ ಹೊತ್ತಿಗೆ ಮುಖ್ಯಮಂತ್ರಿ ಕುಟುಂಬ ಸಮೇತ ದೇವಳ ಪ್ರವೇಶಿ ಮಂಜುನಾಥನ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಖ್ಯಮಂತ್ರಿಗಳ ಪರವಾಗಿ ಶತರುದ್ರಾಭಿಷೇಕ ಸಂಕಲ್ಪ ನೆರವೇರಿಸಲಾಯಿತು.
ದೇವಳದಿಂದ ಹೊರಬಂದು ಪಕ್ಕದಲ್ಲೇ ಇರುವ ಡಾ. ವಿರೇಂದ್ರ ಹೆಗ್ಗಡೆ ಬೀಡಿಗೆ ತೆರಳಿದ ಮುಖ್ಯಮಂತ್ರಿಗಳನ್ನು ಡಾ. ಹೆಗ್ಗಡೆಯವರು ಸಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ತಡವಾಗಿ ಬಂದ ಸಿಎಂ
ಸೋಮವಾರ ಸಂಜೆ 4 ಗಂಟೆಗೆ ಆಗಮಿಸಬೇಕಾಗಿದ್ದ ಎಚ್.ಡಿ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಆಗಮಿಸಿದಾಗ ರಾತ್ರಿ 8.30 ಆಗಿತ್ತು. ಧರ್ಮಸ್ಥಳ ಸನ್ನಿಧಿ ವಸತಿ ಗೃಹದಲ್ಲಿ ಸ್ನಾನ ಪೂರೈಸಿದ ಸಿಎಂ ಕುಟುಂಬ, ರಾತ್ರಿ 9ಕ್ಕೆ ದೇವಸ್ಥಾನಕ್ಕೆ ಆಗಮಿಸಿತು. ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳ ಕುಟುಂಬವನ್ನು ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಬೋಜೇ ಗೌಡ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಮೊಹಮ್ಮದ್ ಕುಂಞಿ, ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ, ಎಂ.ಬಿ. ಸದಾಶಿವ ಉಪಸ್ಥಿತರಿದ್ದರು.
ನಿಗದಿಯಂತೆ ಶಿರಾಡಿ ಘಾಟಿ ರಸ್ತೆಯ ಮೂಲಕ ಆಗಮಿಸಬೇಕಾಗಿದ್ದ ಸಿಎಂ, ಶಿರಾಡಿ ಬ್ಲಾಕ್ ಆದ ಕಾರಣದಿಂದ ರಸ್ತೆ ಬದಲಿಸಿ, ಹಾಸನದಿಂದ ಚಾರ್ಮಾಡಿ ಘಾಟಿ ಮೂಲಕ ಆಗಮಿಸಿದ್ದರು. ಮುಖ್ಯಮಂತ್ರಿಗಳು ಸಂಜೆ ಧರ್ಮಸ್ಥಳಕ್ಕೆ ಆಗಮಿಸಿ, ಬಳಿಕ ಸುಬ್ರಹ್ಮಣ್ಯಕ್ಕೆ ತೆರಳಿ ವಾಸ್ತವ್ಯ ಹೂಡಬೇಕಿತ್ತು. ಧರ್ಮಸ್ಥಳ ಕಾರ್ಯಕ್ರಮ ಮುಗಿದಾಗ ರಾತ್ರಿ 10.30 ಕಳೆದಿದ್ದು, ನಂತರ ಕುಕ್ಕೆ ಸುಬ್ರಮಣ್ಯಕ್ಕೆ ತೆರಳದೇ ಧರ್ಮಸ್ಥಳದಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿದರು.