ಉಡುಪಿ, ಆ 13: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಭಾರೀ ಗಾಳಿ ಮಳೆಯಾಗಿತ್ತಿದ್ದು ಮಧ್ಯಾಹ್ನ ಸುರಿದ ಗಾಳಿ ಮಳೆಗೆ ಹಲವೆಡೆ ಹಾನಿಯಾಗಿದೆ. ಜಿಲ್ಲೆಯ ಪೆರ್ಣಂಕಿಲದಲ್ಲಿ ೫೦ಕ್ಕೂ ಹೆಚ್ಚು ಮನೆಗೆ ಹಾನಿಯುಂಟಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಉಡುಪಿಯ ಕಾಪು ತಾಲೂಕಿನ ಪೆರ್ಣಂಕಿಲ ಗ್ರಾಮದ ಜಡ್ಡು, ಜನತಾನಗರ, ವರ್ವಾಡಿ ಪರಿಸರದಲ್ಲಿ ಬೀಸಿದ ಭಾರೀ ಸುಂಟರಗಾಳಿಗೆ ೫೦ಕ್ಕೂ ಹೆಚ್ಚು ಮನೆಗಳ ಹಂಚು, ತಗಡು ಶೀಟುಗಳಿಗೆ ಹಾನಿಯಾಗಿದ್ದು ಹಲಸು, ಮಾವು ಸೇರಿದಂತೆ ನೂರಾರು ಬೃಹತ್ ಮರಗಳು ಧರೆಗುರುಳಿವೆ. ಹತ್ತಾರು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಪು ಜಾರ ಎಂಬಲ್ಲಿ ಮರವೊಂದು ಧರಾಶಾಹಿಯಾಗಿದೆ. ಮರ ಬಿದ್ದು ಹೆದ್ದಾರಿ ಬದಿಯ ವಿದ್ಯುತ್ ತಂತಿಗೂ ಹಾನಿಯಾಗಿದ್ದು ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮೂಡುಬೆಳ್ಳೆ, ಉಡುಪಿ ಸಂಪರ್ಕಿಸುವ ಹೆದ್ದಾರಿ ಮೇಲೆ ಮರ ಬಿದ್ದ ಪರಿಣಾಮ ಕೆಲ ಕಾಲ ವಾಹನ ಸಂಚಾರಕ್ಕೂ ತೊಡಕುಂಟಾಗಿತ್ತು. ಸ್ಥಳಕ್ಕೆ ತಾಲೂಕು ಪಂಚಾಯತ್ ಸದಸ್ಯೆ ಸುಜಾತ ಸುವರ್ಣ, ಬೆಳ್ಳೆ ಪಿ.ಡಿ.ಓ ದಯಾನಂದ್ ಬೆಣ್ಣೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಗಾಳಿ ಮಳೆಗೆ ಮರದ ಕೊಂಬೆ ತುಂಡಾಗಿ ಬಿದ್ದು ವಿದ್ಯುತ್ ತಂತಿ ಟೆಂಪೋದ ಮೇಲೆ ಬಿದ್ದು ಅದೃಷ್ಟವಶಾತ್ ತಂದೆ ಮಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕುಂದಾಪುರದ ಕಂಡ್ಲೂರು ಬಳಿ ನಡೆದಿದೆ. ಮರವಂತೆಯ ಜಾತ್ರೆ ಮುಗಿಸಿ ನಾಗೇಶ್ ಅವರು ಕುಂದಾಪುರದ ಕಂಡ್ಲೂರು ಜಾತ್ರೆಗೆ ತನ್ನ ಸಾಮಾಗ್ರಿಗಳನ್ನು ಟೆಂಪೋದಲ್ಲಿ ತುಂಬಿಸಿಕೊಂಡು ಹೋಗುತ್ತಿರುವಾಗ ಭಾರೀ ಮಳೆಯ ಕಾರಣ ಟೆಂಪೋವನ್ನು ಕಂಡ್ಲೂರು ರಾಮ ಮಂದಿರದ ಹತ್ತಿರ ನಿಲ್ಲಿಸಿದ್ದರು. ಆ ವೇಳೆ ಮರದ ಕೊಂಬೆ ತುಂಡಾಗಿ ವಿದ್ಯುತ್ ತಂತಿಯು ಟೆಂಪೋ ಮೇಲೆ ಬಿದ್ದಿದೆ. ಅದೃಷ್ಟವಶಾತ್ ವಿದ್ಯುತ್ ಸಂಪರ್ಕವಿಲ್ಲದ ಕಾರಣ ತಂದೆ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಗಾಳಿ ಮಳೆಗೆ ಪಡುಬಿದ್ರೆಯ ಮಣಿಪುರ ಗ್ರಾಮ ಮಂಚಾಯತ್ ವ್ಯಾಪ್ತಿ ಕುಂತಾಳ ನಗರ ಎಂಬಲ್ಲಿ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ. ಸುರೇಶ್ ಎಂಬವರ ಮನೆ ಮೇಲೆ ಮರ ಬಿದ್ದಿದ್ದು, ಮನೆಯ ಛಾವಣಿ ಕುಸಿದು ಸಿಮೆಂಟ್ ಶೀಟ್, ಗೋಡೆಗೆ ಹಾನಿಯಾಗಿದೆ. ಘಟನೆ ವೇಳೆ ಮನೆಯಲ್ಲಿದ್ದ ಸದಸ್ಯರು ಅಪಾಯದಿಂದ ಅದೃಷ್ಟಾವಶತ್ ಪಾರಾಗಿದ್ದಾರೆ. ಘಟನೆಯಿಂದ ಸುಮಾರು 25ರಿಂದ 30 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಮಣಿಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ, ತಾಲೂಕು ಪಂಚಾಯತ್ ಸದ್ಯಸೆ ಸಂದ್ಯಾ ಶೆಟ್ಟಿ, ಪಂಚಾಯತ್ ಪಿಡಿಓ ಬೂದ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಂದಾಪುರದ ಕರ್ಕಿಕಳಿಯಲ್ಲಿ ಕಡಲ್ಕೊರೆತ
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುಂದಾಪುರದ ಕರ್ಕಿಕಳಿ ಬಳಿಯ ಯಕ್ಷೇಶ್ವರಿ ದೇವಸ್ಥಾನದ ಸಮೀಪದ ಕಡಲ ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ತೀರವಾಸಿಗಳನ್ನು ಆತಂಕಕ್ಕೀಡು ಮಾಡಿದೆ. ಭಾರೀ ಮಳೆಗೆ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು ಸಮುದ್ರಪಾಲಾಗುವ ಭೀತಿಯಲ್ಲಿದ್ದ ನೂರಾರು ದೋಣಿಗಳನ್ನು ಸುರಕ್ಷಿತ ಸ್ಥಳಗಳಿಗೆ ತರಲಾಗಿದೆ. ಕುಂದಾಪುರದಾದ್ಯಂತ ಬೆಳಗ್ಗಿನಿಂದಲೇ ಭಾರೀ ಮಳೆಯಾಗುತ್ತಿದ್ದು ಉಪ್ಪುಂದ ಕರ್ಕಿಕಳಿ ಸಮುದ್ರ ತೀರ ಭಾಗದ ಸಮುದ್ರದಲ್ಲಿ ದೊಡ್ಡ ಗಾತ್ರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿದೆ. ಮಳೆಯ ಆರ್ಭಟ ಹೆಚ್ಚಾಗಿರೋದ್ರಿಂದ ಸಮುದ್ರಕ್ಕಿಳಿಯದಂತೆ ಸ್ಥಳೀಯರಿಗೆ ಹಾಗೂ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.