ಸುಳ್ಯ, ಆ 13: ಕಳೆದ ಕೆಲ ದಿನಗಳಿಂದ ಕರಾವಳಿಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಸುಳ್ಯದ ಪಯಸ್ವಿನಿ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಇದರಿಂದ 5 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಸಂಪಾಜೆ ಸಮೀಪದ ಊರುಬೈಲು ಸೇತುವೆಗೆ ಹಾನಿಯಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಸಂಪಾಜೆ ಗ್ರಾಮದಿಂದ ಸಂಪರ್ಕ ಸಾಧಿಸಲು ಮಾರ್ಪಡ್ಕ ಎಂಬಲ್ಲಿ ಸುಮಾರು 5 ವರ್ಷದ ಹಿಂದೆ ಉದ್ಯೋಗ ಖಾತರಿ ಯೋಜನೆಯಲ್ಲಿ 10 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಂಡಿತ್ತು. ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಸೇತುವೆಯ ಫಿಲ್ಲರ್ಗೆ ಬೃಹದಾಕಾರದ ಮರಗಳು ಬಂದು ಗುದ್ದಿದ್ದು ಸೇತುವೆಯ ಫಿಲ್ಲರ್ ವಾಲಿ ಅಪಾಯವನ್ನು ಆಹ್ವಾನಿಸುತ್ತಿದೆ. ಈ ಸೇತುವೆ ಸಾವಿರಾರು ಮನೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೆ ಸುಳ್ಯ ಮತ್ತು ಮಡಿಕೇರಿಯ ಶಾಲಾ-ಕಾಲೇಜುಗಳಿಗೆ ಹೋಗುವ ನೂರಾರು ಮಕ್ಕಳು ಈ ಸೇತುವೆಯನ್ನೇ ಅವಲಂಬಿಸಿದ್ದು ಊರುಬೈಲು ಸೇತುವೆ ಸಂಪರ್ಕ ಕಡಿತಗೊಂಡರೆ ಚೆಂಬು, ಆನ್ಯಳ, ಕಾಂತಬೈಲು, ದಬ್ಬಡ್ಕ ಇತರ ಕಡೆಗಳಿಗೆ ಸಂಪರ್ಕ ಕೊಂಡಿಯೇ ಕಳಚಿದಂತಾಗುತ್ತದೆ.