ಮಂಗಳೂರು,ಅ 2: ಮಂಗಳೂರಿನಲ್ಲಿ ರಾಜಕೀಯ ಗರಿ ಕೆದರಿದೆ. ಕಾರಣ ಮಂಗಳೂರಿಗೆ ಇಂದು ಅಮಿತ್ ಶಾ ಭೇಟಿ. ಇದರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮಂಗಳೂರು ಪ್ರವಾಸದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಹುತೇಕ ರಾಜ್ಯ ನಾಯಕರು ಮಂಗಳೂರಿಗೆ ಆಗಮಿಸಲಿದ್ದಾರೆ. ಪಕ್ಷ ಬಲವರ್ಧನೆ ಕುರಿತಂತೆ ಕರಾವಳಿಗೆ ಶಾ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದಿದ್ದು, ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆ ನಡೆಸಲಾಗಿದೆ. ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ಅಮಿತ್ ಶಾ ಬೇಟಿ ಮಹತ್ವ ಪಡೆದು ಕೊಂಡಿದೆ. ರಾಜಕೀಯದ ಚದುರಂಗದಾಟದಲ್ಲಿ ಪಳಗಿದ ಕೈ ಅಮಿತ್ ಶಾ ಅವರದ್ದು. ಹೀಗಾಗಿ ಚುನಾವಣೆ ಸಮೀಪವಿರುವಾಗ ಅಮಿತಾ ಶಾ ಯಾವ ತಂತ್ರಗಾರಿಕೆ ಕರ್ನಾಟಕದಲ್ಲಿ ಹೆಣೆಯುತ್ತಾರೆಂಬುದು ಬಹಳಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕೇರಳದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಒಂದು ವಾರ ಅವಧಿಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 6 ಗಂಟೆಗೆ ಮಂಗಳೂರಿಗೆ ಆಗಮಿಸಲಿದ್ದಾರೆ. ಆ ಬಳಿಕ ಶಾ ಅವರನ್ನು ಸುಮಾರು 250ರಿಂದ 300 ವಾಹನಗಳ ಮೆರವಣಿಗೆ ಮೂಲಕ ಕೇರಳದ ಗಡಿಭಾಗ ತಲಪಾಡಿ ತನಕ ಕರೆ ದೊಯ್ಯ ಲಾಗುವುದು. ಅಲ್ಲಿ ಕೇರಳದ ಬಿಜೆಪಿ ನಾಯಕರು ಸ್ವಾಗತಿಸಲಿದ್ದಾರೆ. ಶಾ ಅವರು ಕೇರಳ ಭೇಟಿ ಮುಗಿಸಿ ಅ. 3ರಂದು ಸಂಜೆ ಮತ್ತೆ ಮಂಗಳೂರಿಗೆ ವಾಪಸಾಗಿ ವಾಸ್ತವ್ಯ ಮಾಡಲಿದ್ದಾರೆ. ಆ ಬಳಿಕ ಅ. 4 ರಂದು ಸಂಜೆ 5ಗಂಟೆಗೆ ಡಾ| ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್ನಲ್ಲಿ ವಿಶೇಷ ಸಬೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ಶಾ ಭೇಟಿ ಹಿನ್ನಲೆಯಲ್ಲಿ ನಗರದಲ್ಲಿ ಪೊಲೀಸರು ವಿಶೇಷ ಬಂದೋಬಸ್ತ್ ಕೈಗೊಳ್ಳಲಾಗಿದೆ.