ಬೆಳ್ತಂಗಡಿ, ಆ 13: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಎಂಬಲ್ಲಿ ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳಿಗೆ ವಿದ್ಯುತ್ ಸಂಪರ್ಕಿಸುವ ವಿದ್ಯುತ್ ಕಂಬಗಳು ಧರೆಶಾಹಿಯಾದ ಘಟನೆ ನಡೆದಿದೆ.
ಶತಮಾನಗಳಿಂದ ವಿದ್ಯುತ್ ಸಂಪರ್ಕದಿಂದ ವಂಚಿತಗೊಂಡಿದ್ದ ಮಲೆಕುಡಿಯ ಸಮುದಾಯಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಇಲಾಖೆಯ ಪರವಾನಗಿ ಪಡೆದು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಕಳೆದ ವರ್ಷವಷ್ಟೇ ಇಲ್ಲಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿತ್ತು. ಇಂದು ಸುರಿದ ಭಾರೀ ಗಾಳಿ - ಮಳೆಗೆ ಬೃಹತ್ ಗಾತ್ರದ ಮರ ಬಿದ್ದು ಸವಣಾಲು ಗ್ರಾಮದ ಜಾಲಾಡೆ, ಕಂಬುಜೆ ಮೊದಲಾದೆಡೆಗಳಲ್ಲಿ ಸುಮಾರು 25 ರಿಂದ 30 ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದು ಹಾನಿಗೀಡಾಗಿವೆ. ಈ ಪ್ರದೇಶವು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಂದಾಯ ಜಮೀನಿನಲ್ಲಿ ಇದ್ದು, ಕಳೆದ ವರ್ಷ ವಿದ್ಯುತ್ ಸಂಪರ್ಕ ಮಾಡುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಪಾಯಕಾರಿ ಮರಗಳ ತೆರವಿಗೆ ನಿರಾಕರಿಸಿತ್ತು. ಇಂದಿನ ಈ ಘಟನೆಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿ ಕಾರಣ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಾಲೂಕು ಸಂಘಟನೆ ಆರೋಪಿಸಿದೆ.