ಉಡುಪಿ, ಆ 13: ಕರಾವಳಿಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಪರಿಣಾಮ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ 14ರಂದು ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆಗಳು, ಪಿಯು ಕಾಲೇಜು, ಡಿಗ್ರಿ ಕಾಲೇಜುಗಳು ಹಾಗೂ ಡಿಪ್ಲೊಮಾಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಫ್ರಾನ್ಸಿಸ್ ಆದೇಶ ನೀಡಿದ್ದಾರೆ. ಕರಾವಳಿಯಲ್ಲಿ ಕಳೆದ 1 ವಾರದಿಂದ ಮಳೆ ಚುರುಕುಗೊಂಡಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ. ಆಗಸ್ಟ್ 11ರಂದು ಶನಿವಾರ ರಜೆ ಘೋಷಣೆ ಮಾಡಿದ್ದು, ಇಂದು ಕೂಡಾ ರಜೆ ಘೋಷಣೆ ಮಾಡಲಾಗಿತ್ತು. ನಾಳೆಯ ರಜೆ ಘೋಷಣೆ ಮೂಲಕ ಶಾಲಾ ಕಾಲೇಜುಗಳಿಗೆ ಸತತವಾಗಿ 4 ದಿನಗಳ ರಜೆ ಸಿಕ್ಕಂತಾಗಿದೆ. ಇನ್ನು ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸರಕಾರಿ ರಜೆ ಇದೆ.