ಕುಂದಾಪುರ, ಆ 13: ಕುಂದಾಪುರ ಪುರಭೆಯ ರಚನೆಯ ಬಳಿಕ ಮೂರು ಬಾರಿ ಸದಸ್ಯೆಯಾಗಿ ಒಂದು ಬಾರಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಸಿಪಿಎಂನ ಗುಣರತ್ನ ಅಧಿಕಾರದಾಸೆಗೆ ಬಲಿಯಾಗಿದ್ದಾರೆ. ಪರಿಣಾಮವಾಗಿ ಇಪ್ಪತ್ತು ವರ್ಷಗಳಿಂದ ನಂಬಿಕೊಂಡು ಬಂದಿದ್ದ ಸಿದ್ಧಾಂತಕ್ಕೆ ತಿಲಾಂಜಲಿಯಿಟ್ಟು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಕುಂದಾಪುರ ಪುರಸಭೆಯಲ್ಲಿ ಇದ್ದ ಸಿಪಿಐಎಂ ಪಕ್ಷದ ಒಂದು ವಿಕೆಟ್ ಬಿದ್ದಂತಾಗಿದೆ. ಪರಿಣಾಮವಾಗಿ ಅಧಿಕಾರದ ದಾಹ ಸಿಪಿಎಂ ಕಾರ್ಯಕರ್ತರನ್ನೂ ಬಿಟ್ಟಿಲ್ಲ ಎಂಬುದನ್ನು ಗುಣರತ್ನ ಸಾಬೀತು ಮಾಡಿದ್ದಾರೆ.
ಕುಂದಾಪುರದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಗುಣರತ್ನ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಸಮ್ಮುಖದಲ್ಲಿ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ ಪಕ್ಷದ ಧ್ವಜ ನೀಡುವ ಮೂಲಕ ಬರಮಾಡಿಕೊಂಡಿದ್ದಾರೆ.ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್ ಕೊಡ್ಗಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ ಹಾಜರಿದ್ದರು.
ಪಕ್ಷದಿಂದ ಉಚ್ಚಾಟನೆ : ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದು ಖಚಿತವಾಗುತ್ತಿದ್ದಂತೆ ಗುಣರತ್ನ ಅವರನ್ನು ಸಿಪಿಐಎಂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಸಿಪಿಐಎಂನ ಕುಂದಾಪುರ ವಲಯ ಸಮಿತಿ ಕಾರ್ಯದರ್ಶಿ ಹೆಚ್. ನರಸಿಂಹ ಹೇಳಿಕೆ ನೀಡಿದ್ದಾರೆ. ಕಳೆದ ೨೦ ವರ್ಷ ಗಳಿಂದ ಸಿಪಿಐಎಂ ಪಕ್ಷದಿಂದ ಸ್ಪರ್ಧಿಸಿ ಕುಂದಾಪುರ ಪುರಸಭೆಯ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಗುಣಾರತ್ನ ಕ್ಷೇತ್ರದ ಜನರನ್ನು ಕಡೆಗಣಿಸಿದ್ದಾರೆ ಎಂದಿದ್ದಾರೆ ಅಲ್ಲದೇ ಪಕ್ಷದ ಹಿರಿಯರು ಮಾಡಿದ ಮನವಿಯನ್ನು ಗುಣರತ್ನ ತಿರಸ್ಕರಿಸಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಮೋದಿ ನೇತೃತ್ವದ ಕೋಮುವಾದಿ ಪಕ್ಷ ಬಿಜೆಪಿಗೆ ಸೇರ್ಪಡೆಗೊಂಡಿರುವುದನ್ನು ಪಕ್ಷ ಖಂಡಿಸುತ್ತದೆ ಎಂದಿದ್ದಾರೆ.
ಪುರಸಭೆ ಚುನಾವಣೆಯ ಕಾವು ರಾಜ್ಯದಾದ್ಯಂತ ಬಿಸಿಯಾಗುತ್ತಿದೆ. ರಾಜ್ಯದ ಪ್ರಮುಖ ಮೂರು ಪಕ್ಷಗಳಾದ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ಸ್ಥಳೀಯ ಚುನಾವಣೆಗಳ ಗೆಲುವಿಗೆ ಪಣತೊಟ್ಟಿವೆ. ಇದಕ್ಕೆ ಕುಂದಾಪುರ ಪುರಸಭೆಯೂ ಹೊರತಾಗಿಲ್ಲ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಲವರು ಹಿಂದೆ ಅವಕಾಶ ಕೊಟ್ಟ ಪಕ್ಷಗಳಿಗೆ ಮಾಜಿಗಳಾಗುತ್ತಿದ್ದಾರೆ.