ಕುಂದಾಪುರ, ಆ 13:ಶಂಕರನಾರಾಯಣ ಗ್ರಾಮದ ಹಲವಾರು ಕಡೆಗಳಲ್ಲಿ ಭತ್ತ ಬೇಸಾಯಗಾರರಿಗೆ ಬಸವನಹುಳು ದೊಡ್ಡ ಶತ್ರುವಾಗಿ ಕಾಣಿಸಿಕೊಳ್ಳುತ್ತಿದ್ದು ಡ್ರಮ್ಸಿಡಾರ್, ಬಿತ್ತನೆಗೆ ಬಿತ್ತಿದ ಬೀಜವನ್ನು ನಾಶ ಪಡಿಸುವ ಮೂಲಕ ರೈತರು ಪುನಃ ಪುನಃ ಬಿತ್ತನೆ ಮಾಡಬೇಕಾದ ಪ್ರಸಂಗ ಒದಗಿದೆ.ಮಳೆಗಾಲದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುವ ಬಸವನಹುಳು (ಜಾಗ್ಟೆ, ಗುಳ್ಳೆ) ಹೊರ ಕವಚ ಹೊಂದಿರುವ ವಿಶಿಷ್ಠ ಜಾತಿಯ ಹುಳು ಭತ್ತದ ಗದ್ದೆಗಳಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತವಾದರೂ ಶಂಕರನಾರಾಯಣ, ಎಡಮಕ್ಕಿ ಮೊದಲಾದ ಕಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಬಿತ್ತಿದ ಬೀಜ ಮೊಳಕೆಯೊಡೆಯುತ್ತಿದ್ದಂತೆ ಮೊಳಕೆಯನ್ನು ತನ್ನ ಉದ್ದ ನಾಲಿಗೆಯ ಮೂಲಕ ನಾಶ ಪಡಿಸುತ್ತಿರುವ ವಿದ್ಯಮಾನ ತಡವಾಗಿ ಬೆಳಕಿಗೆ ಬಂದಿದೆ.
ಶಂಕರನಾರಾಯಣ ಭಾಗದ ಎಡಮಕ್ಕಿ, ಶಂಕರನಾರಾಯಣ ಪರಿಸರದ ರೈತರು ಭತ್ತ ಬೇಸಾಯಕ್ಕೆ ಡ್ರಮ್ಸೀಡಾರ್ ಮತ್ತು ಬಿತ್ತನೆ ಕ್ರಮವನ್ನು ಅನುಸರಿಸಿದ್ದರು. ಎಂದನಿಂತೆ ಬೀಜ ಮೊಳಕೆ ಭರಿಸಿ ಬಿತ್ತಿದ್ದರು. ಆದರೆ ಬೀಜ ಸಸಿಯಾಗಲೇ ಇಲ್ಲ, ಮತ್ತೆ ವಾರದ ನಂತರ ಪುನಃ ಬಿತ್ತನೆ ಮಾಡಿದರೂ ಫಲಿತಾಂಶ ಶೂನ್ಯ. ಆಗ ಚಿಂತೆಗಿಡಾದ ರೈತರು ನಾನಾ ರೀತಿಯಲ್ಲಿ ಯೋಚನೆ ಮಾಡಿದರು. ಹವಾಮಾನ, ನೀರು, ಗುಣಮಟ್ಟದ ಬೀಜ ಎಲ್ಲ ಸರಿಯಿದ್ದು ಬೀಜ ಏಕೆ ಸಸಿಯಾಗುತ್ತಿಲ್ಲ ಎಂದೂ ಎಷ್ಟೆ ತಲೆ ಕೆಡಿಸಿಕೊಂಡರೂ ಉತ್ತರ ಸಿಗಲಿಲ್ಲ. ಪ್ರಗತಿಪರ ಕೃಷಿಕ ರಾಘವೇಂದ್ರ ದೇವಾಡಿಗ ಕೂಡಾ ಈ ಸಮಸ್ಯೆ ಹೇಗೆ ಉಂಟಾಗುತ್ತದೆ ಎಂದು ಗದ್ದೆಗಿಳಿದು ಪರೀಕ್ಷೆ ಗೆ ಮುಂದಾದರು. ಬೀಜ ಒಳ್ಳೆದಿದೆ. ಸನ್ನಿವೇಶವೂ ಪ್ರಶಸ್ತವಾಗಿದೆ. ಹಾಗಿದ್ದು ಬೀಜ ಏಕೆ ಗಿಡವಾಗುತಿಲ್ಲ? ಬಿತ್ತಿದ ಬೀಜ ಪೂರ್ತಿಯಾಗಿ ಏಕೆ ನಾಶವಾಗುತ್ತದೆ ಎಂದು ಗದ್ದೆಗೆ ಇಳಿದು ಸರಿಯಾಗಿ ಪರೀಕ್ಷಿಸಿದಾಗ ಕಂಡು ಬಂದ ಸತ್ಯ ಗದ್ದೆಯಲ್ಲಿ ವಿಪರೀತ ಸಂಖ್ಯೆಯಲ್ಲಿದ್ದ ಬಸವನಹುಳು. ಮಿತಿಮೀರಿದ ಸಂಖ್ಯೆಯಲ್ಲಿದ್ದ ಬಸವನ ಹುಳುಗಳಲ್ಲಿ ಒಂದನ್ನು ಹಿಡಿದು ಪರೀಕ್ಷಿಸಿದಾಗ ಅದರ ನಾಲಿಗೆಯಲ್ಲಿ ಭತ್ತ ಇರುವುದು ಕಂಡು ಬಂತು. ಪ್ರತಿಯೊಂದು ಬಸವನಹುಳುವಿನ ಬಾಯಿಯಲ್ಲೂ ಭತ್ತದ ಬೀಜ ಇದ್ದವು. ಭತ್ತದ ಬೀಜ ನಾಶ ಮಾಡಿದ್ದು ಬಸವನ ಹುಳುಗಳೆ ಎನ್ನುವ ಸತ್ಯ ಗೊತ್ತಾಯಿತು.
ಶಂಕರನಾರಾಯಣದ ರಾಘವೇಂದ್ರ ಉಪಾಧ್ಯಾಯ, ಸುಬ್ಬು ಭಟ್ ಯಡಮಕ್ಕಿ, ಗಣಪ ಕುಲಾಲ್ ಮೊದಲಾದವರು ಹಸನಾದ ಗದ್ದೆಗೆ ಬಿತ್ತಿದ ಬೀಜ ಸಸಿಯಾಗದೆ ಮೂರು ಮೂರು ಬಾರಿ ಬಿತ್ತನೆ ಮಾಡುವ ಮೂಲಕ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಮೊದಲೇ ಭತ್ತದ ಸಾಗುವಳಿಗೆ ಕಾರ್ಮಿಕರ ಕೊರತೆ, ದುಬಾರಿ ವೇತನ, ಗೊಬ್ಬರ ಇತ್ಯಾದಿಗಳಿಂದ ಒಮ್ಮೆ ಸಾಗುವಳಿ ಮಾಡುವುದೇ ಕಷ್ಟ ಹಾಗಿರುವಾಗ ಮೂರು ಬಾರಿ ಅದೇ ಗದ್ದೆಗೆ ಬೀಜ ಹಾಕಬೇಕೆಂದರೆ ಅದರಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಆದರೂ ಗದ್ದೆ ಹಡಿಲು ಬಿಡಬಾರದು ಎಂಬ ಕಾರಣಕ್ಕೆ ಹಠಕ್ಕೆ ಬಿದ್ದವರಂತೆ ಮತ್ತೆ ಸಾಗುವಳಿ ಮಾಡುತ್ತಿದ್ದಾರೆ.
ರಾಘವೇಂದ್ರ ಉಪಾಧ್ಯಾಯರು ಒಂದು ಎಕ್ರೆ ಗದ್ದೆಯಲ್ಲಿ ಎರಡು ಬಾರಿ ಡ್ರಮ್ಸೀಡಾರ್ ಮಾಡಿದರೂ ಭತ್ತದ ಸಸಿಗಳು ಹುಟ್ಟದೇ ಇರುವುದರಿಂದ ಮೂರನೇ ಬಾರಿಗೆ ಶನಿವಾರ ಡ್ರಮ್ಸೀಡಾರ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಸವನಹುಳುವಿನ ಉಪದ್ರದ ಅರಿವಾದ್ದರಿಂದ ಬಿತ್ತನೆಗೆ ಮುಂಚೆ ಪಾಲಿಡಾನ್ ಹರಳುಗಳನ್ನು ಗದ್ದೆಗೆ ಬೆರೆಸಿದ ನಂತರ ಡ್ರಮ್ ಸೀಡಾರ್ ಮಾಡಿದ್ದಾರೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ
ಸತತ ಮೂರು ಬಾರಿ ಬಿತ್ತನೆ ಮಾಡಿದರೂ ಸಸಿಯಾಗದ ಹಿನ್ನೆಲೆಯಲ್ಲಿ ಬಸವನ ಹುಳುಗಳು ಮೊಳಕೆ ನಾಶ ಪಡಿಸಿರುವುದೇ ಕಾರಣ ಎಂಬ ಶಂಕೆ ಇರುವುದರಿಂದ ಅಧಿಕಾರಿಗಳ ಗಮನಕ್ಕೆ ತಂದಾಗ ಶಂಕರನಾರಾಯಣದ ರಾಘವೇಂದ್ರ ಉಪಾಧ್ಯಾಯರವರ ಗದ್ದೆಗೆ ಕುಂದಾಪುರ ಕೃಷಿ ಇಲಾಖೆಯ ರಾಜೇಂದ್ರ ಶೆಟ್ಟಿಗಾರ್ ಮತ್ತು ಇಲಾಖೆಯ ತಂಡ ಭೇಟಿ ಪರಿಶೀಲನೆ ನಡೆಸಿದ್ದಾರೆ. ಗದ್ದೆಯಲ್ಲಿ ವಿಪರೀತ ಸಂಖ್ಯೆಯಲ್ಲಿ ಬಸವನ ಹುಳುಗಳು ಇರುವುದನ್ನು ರೇಷ್ಮೆ ಇಲಾಖೆ ನಿರೀಕ್ಷಕ ರಾಜೇಂದ್ರ ಶೆಟ್ಟಿಗಾರ್ ಗಮನಿಸಿದರು. ಈ ಸಮಸ್ಯೆಗೆ ಸೂಕ್ತ ಕ್ರಮ ಕ್ಯಗೊಳ್ಳುವ ಬಗ್ಗೆ ಕೃಷಿ ವಿಜ್ಞಾನಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯ ಸಿಬ್ಬಂದಿಗಳಾದ ವೃಂದ ಮತ್ತು ಜ್ಯೋತಿ ಉಪಸ್ಥಿತರಿದ್ದರು.
ಎಲ್ಲಾ ಕಡೆಯಲ್ಲಿಯೂ ಗದ್ದೆಯಲ್ಲಿ ಬಸವನ ಹುಳುಗಳು ಕಂಡು ಬರುತ್ತದೆ. ಈ ಭಾಗದಲ್ಲಿ ವಿಪರೀತ ಸಂಖ್ಯೆಯಲ್ಲಿವೆ. ಅವುಗಳು ರಾತ್ರಿ ಹೊತ್ತಲ್ಲಿ ಭತ್ತದ ಮೊಳಕೆಯನ್ನು ನಾಲಿಗೆಯಿಂದ ನೆಕ್ಕುತ್ತವೆ. ಇದರಿಂದ ಭತ್ತ ಸಸಿಯಾಗದೇ ನಾಶವಾಗುತ್ತದೆ. ಇದಕ್ಕೆ ಮುಂಜಾಗೃತವಾಗಿ ಕೃಷಿ ವಿಜ್ಞಾನಿಗಳು ಸೂಕ್ತ ಪರಿಹಾರಗಳನ್ನು ಕಂಡು ಹಿಡಿಯಬೇಕು. ಶಂಕರನಾರಾಯಣ ಭಾಗದಲ್ಲಿ ಈ ಬಾರಿ ಕೆಲವು ರೈತರು ಮೂರು ಮೂರು ಬಾರಿ ಬಿತ್ತನೆ ಮಾಡಿದ್ದಾರೆ-ರಾಘವೇಂದ್ರ ದೇವಾಡಿಗ ಹಾಲಾಡಿ, ಪ್ರಗತಿಪರ ಕೃಷಿಕರು.
ಬಸವನ ಹುಳುಗಳ ಬಗ್ಗೆ ನಾವು ಧಾರವಾಡದ ತಜ್ಞರನ್ನು ಸಂಪರ್ಕಿಸಿದಾಗ ಸಾಕಷ್ಟು ಮಾಹಿತಿ ಲಭಿಸಿದೆ. ಜುಲೈಯಿಂದ ಸಪ್ಟೆಂಬರ್ ತನಕ ಇವುಗಳ ಬಾಧೆ ಇರುತ್ತದೆ. ಇವು 227 ಜಾತಿಯ ಸಸ್ಯ, ಹುಲ್ಲು ತಿಂದು ಬದುಕುತ್ತವೆ. ಸಂಜೆ 5 ಗಂಟೆಯಿಂದ ಬೆಳಗಿನ ತನಕ ಅವು ಕಾರ್ಯಚರಿಸುತ್ತವೆ.ಹಗಲು ವೇಳೆ ಮಣ್ಣಿನಡಿ ಅಡಗಿರುತ್ತವೆ. ಅವು ಸಾಕಷ್ಟು ದಿನಗಳ ಕಾಲ ಆಹಾರ ಇಲ್ಲದೇ ಬದುಕಬಲ್ಲವು. ಕೊಳೆತ ತರಕಾರಿ, ಹಣ್ಣುಗಳ Metaldehyde (snail kill) ಸೇರಿಸಿ ಗದ್ದೆಯ ಬದುವಲ್ಲಿ ಇರಿಸಿದರೆ ಕೊಳೆತ ಪದಾರ್ಥಗಳ ಆಕರ್ಷಣೆಗೆ ಬರುವ ಹುಳುಗಳು ಸೇವಿಸಿ ಸಾಯುತ್ತವೆ. ಒಂದು ಗದ್ದೆಯಿಂದ ಇನ್ನೊಂದು ಗದ್ದೆಗೆ ಹರಡದಂತೆ ಮೆಲೆಥಿಯನ್ ಪೌಡರ್ರಿಂದ ಗದ್ದೆಯ ನಾಲ್ಕು ಕಡೆ ರೇಖೆಗಳನ್ನು ಬಳಿದು ನಿಯಂತ್ರಿಸಬಹುದು ವಿಠಲ ರಾವ್ ಸಹಾಯಕ ಕೃಷಿ ನಿರ್ದೇಶಕರು