ಕಡಬ, ಆ 13: ಮುಳುಗಿದ ಸೇತುವೆ ಮೇಲೆ ದಾಟುವ ದುಸ್ಸಾಹಸಕ್ಕೆ ಇಳಿದ ಅನೇಕ ಜೀವಗಳನ್ನು ಬಲಿ ಪಡೆದ ಹೊಸಮಠ ಮುಳುಗು ಸೇತುವೆ ಮೇಲೆ ಭಾನುವಾರ ಸಂಜೆ ಪೊಲೀಸ್ ಜೀಪು ದಾಟಿದೆ ಎನ್ನುವ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಹೊಸಮಠ ಮುಳುಗು ಸೇತುವೆ ಮೇಲೆ ನೆರೆ ನೀರು ಹರಿಯುತ್ತಿದ್ದ ವೇಳೆ ಕಾವಲಿಗಿದ್ದ ಗೃಹ ರಕ್ಷಕ ಸಿಬ್ಬಂದಿಯನ್ನು ದಬಾಯಿಸಿ, ರಕ್ಷಣಾ ಗೇಟನ್ನು ತೆರೆಸಿ ಅಪಾಯಕಾರಿ ರೀತಿಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು ತಮ್ಮ ಇಲಾಖಾ ವಾಹನವನ್ನು ದಾಟಿಸಿದ ಘಟನೆ ಭಾನುವಾರ ಸಂಜೆ 6.30 ಕ್ಕೆ ಸಂಭವಿಸಿದೆ.
ಸೇತುವೆ ಮುಳುಗಿದ್ದಾಗ ಜನರಿಗೆ ಬುದ್ದಿವಾದ ಹೇಳಿ ವಾಹನವನ್ನು ದಾಟಿಸದಂತೆ ತಡೆಯಬೇಕಾದ ಪೊಲೀಸ್ ಅಧಿಕಾರಿಗಳೇ ಅಪಾಯಕಾರಿ ನೆರೆ ನೀರಿದ್ದ ಸೇತುವೆ ಮೇಲೆ ದಾಟಿಸಿ ಈಗ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಕಡಬದಲ್ಲಿ ಭಾನುವಾರ ಸಂಜೆ ಹಿಂದೂ ಜಾಗರಣ ವೇದಿಕೆಯ ವತಿಯಿಂದ ನಡೆಯುವ ಅಖಡ ಭಾರತ ಸಂಕಲ್ಪ ದಿನಾಚರಣೆಯ ಕಾರ್ಯಕ್ರಮದ ಹಿನ್ನಲೆಯಲ್ಲಿ ಸಂಜೆ ಆರೂವರೆ ಹೊತ್ತಿಗೆ ಪೊಲೀಸ್ ಜೀಪೊಂದು ಸೇತುವೆಯ ಮೇಲೆ ದಾಟಿಸಿದ್ದಾರೆ.
ಇದನ್ನು ಗಮನಿಸಿದ ಸ್ಥಳೀಯರು ಕೂಡಾ ತಮ್ಮ ವಾಹನವನ್ನು ಸೇತುವೆ ಮೇಲೆ ದಾಟಿಸಲು ಮುಂದಾದರು.ಆದರೆ ಗೃಹ ರಕ್ಷಕ ಸಿಬ್ಬಂದಿ ಕೂಡಲೇ ವಾಹನ ಗೇಟುಗಳನ್ನು ಮುಚ್ಚಿ ವಾಹನಗಳು ಸಂಚರಿಸಿದಂತೆ ತಡೆದರು. ಇದರಿಂದ ಅಸಮಾಧಾನಗೊಂಡ ಸಾರ್ವಜನಿಕರು ಹಾಗೂ ವಾಹನ ಚಾಲಕರು ನಮಗೊಂದು ನ್ಯಾಯವೇ ಎಂದು ತರಾಟೆಗೆ ತೆಗೆದುಕೊಂಡರು.