ಉಡುಪಿ, ಅ 13:ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರ ವಶದಲ್ಲಿದ್ದ ಉಡುಪಿ ರಥಬೀದಿಯಲ್ಲಿರುವ ಶೀರೂರು ಮಠವನ್ನು ಅಗಸ್ಟ್ 13ರಂದು ದ್ವಂದ್ವ ಮಠವಾದ ಸೋದೆ ಮಠದ ಸುಪರ್ದಿಗೆ ನೀಡಲಾಗುತ್ತಿದೆ. ಜು.19ರಂದು ಸ್ವಾಮೀಜಿಯ ನಿಗೂಢ ಸಾವಿನ ಬಳಿಕ ಪೊಲೀಸರು, ತನಿಖೆಗಾಗಿ ಉಡುಪಿಯಲ್ಲಿರುವ ಶಿರೂರು ಮಠ ಹಾಗೂ ಹಿರಿಯಡ್ಕದಲ್ಲಿರುವ ಮೂಲ ಮಠವನ್ನು ಸುಪರ್ದಿಗೆ ಪಡೆದುಕೊಂಡು ಬಿಗಿ ಭದ್ರತೆ ಒದಗಿಸಿದ್ದರು.
ಇದರಿಂದ ಮಠದೊಳಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. “ಪೊಲೀಸರ ವಶದಲ್ಲಿದ್ದ ಉಡುಪಿಯ ಶಿರೂರು ಮಠವನ್ನು ಸೋದೆ ಮಠಕ್ಕೆ ಬಿಟ್ಟು ಕೊಡಲಾಗುತ್ತಿದೆ. ಅದೇ ರೀತಿ ಸದ್ಯವೇ ಪೊಲೀಸ್ ಇಲಾಖೆ ಮೂಲಕ ಶೀರೂರು ಮಠವನ್ನೂ ಕೂಡ ಸೋದೆ ಮಠಕ್ಕೆ ಬಿಟ್ಟು ಕೊಡಲಿದೆ” ಎಂದು ಸೋದೆ ಮಠದ ದಿವಾನ ಪಿ. ಶ್ರೀನಿವಾಸ ತಂತ್ರಿ ತಿಳಿಸಿದ್ದಾರೆ. ಮಠದ ಹಸ್ತಾಂತರ ಪ್ರಕ್ರಿಯೆ ಮುಗಿದ ಕೂಡಲೇ ಸ್ವಾಮೀಜಿಯ ಆರಾಧನೆಯನ್ನು ನಡೆಸಲಾಗುವುದು. ಈವರೆಗೆ ಉಡುಪಿಯ ಶಿರೂರು ಮಠಕ್ಕೆ ಎಎಸ್ಸೈ ರತ್ನಾಕರ್ ನೇತೃತ್ವದಲ್ಲಿ 10 ಮಂದಿ ಪೊಲೀಸರು ಬೆಳಗ್ಗಿನ ಪಾಳಿ ಹಾಗೂ ಎಎಸ್ಸೈ ನಾರಾಯಣ ನೇತೃತ್ವ ದಲ್ಲಿ 15 ಪೊಲೀಸರು ರಾತ್ರಿ ಪಾಳಿಯಲ್ಲಿ ಭದ್ರತೆಯನ್ನು ಒದಗಿಸುತ್ತಿದ್ದರು. ಇಂದಿನಿಂದ ಈ ಭದ್ರತೆಯನ್ನು ಇಲಾಖೆ ಹಿಂದಕ್ಕೆ ಪಡೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.