ಉಳ್ಳಾಲ ಅ 12: ಹಿರಿಯ ನಾಗರಿಕರೊಬ್ಬರು ತನ್ನ ಸಹೋದರಿ ಮತ್ತು ಬಾವನಿಗೆ ರಾಡಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ತೊಕ್ಕೊಟ್ಟುವಿನ ಕಾಪಿಕಾಡು ಒಂದನೇ ಅಡ್ಡಕ್ರಾಸಿನಲ್ಲಿ ಭಾನುವಾರ ಸಂಭವಿಸಿದ್ದು, ಆರೋಪಿ ಠಾಣೆಗೆ ತೆರಳಿ ಶರಣಾಗಿದ್ದಾರೆ. ಕಾಪಿಕಾಡು ನಿವಾಸಿ ಜಾನೆಟ್ ಡಿಸೋಜಾ(58) ಮತ್ತು ಬಾವ ಜೋಸೆಫ್ (65) ಎಂಬವರ ತಲೆಗೆ ರಾಡಿನಿಂದ ಬಡಿದು ಕೊಲೆಗೆ ಯತ್ನಿಸಲಾಗಿದೆ. ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾನೆಟ್ ಅವರ ಹಿರಿಯ ಸಹೋದರ ಡೇನಿಸ್(78) ಕೃತ್ಯ ನಡೆಸಿದ್ದು, ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
ಹಿರಿಯ ನಾಗರಿಕನಾಗಿರುವ ಡೇನಿಸ್ ಅವರು ಅವಿವಾಹಿತರಾಗಿದ್ದಾರೆ. ಸಿವಿಲ್ ಗುತ್ತಿಗೆದಾರನಾಗಿದ್ದ ಅವರು ತಮ್ಮ ಪಾಲಿನ ಮನೆಯನ್ನೂ ಸಹೋದರಿಯ ಹೆಸರಿಗೆ ಮಾಡಿಕೊಂಡಿದ್ದರು. ಸಹೋದರಿಯ ಕುಟುಂಬದ ಜೊತೆಗೆ ಒಂದೇ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಕೆಲ ವರ್ಷಗಳಿಂದ ಸಹೋದರಿ ಮತ್ತು ಬಾವ ಸರಿಯಾಗಿ ಉಪಚರಿಸುತ್ತಿಲ್ಲ, ಮರ್ಯಾದೆ ನೀಡದೆ, ಆಹಾರವನ್ನು ನೀಡುತ್ತಿರಲಿಲ್ಲ ಅನ್ನುವ ಆರೋಪವನ್ನು ಆರೋಪಿ ಡೇನಿಸ್ ಅವರು ನಡೆಸಿದ್ದಾರೆ. ಈ ವಿಚಾರದಲ್ಲಿ ಹಲವು ಬಾರಿ ಗಲಾಟೆ ನಡೆಯುತ್ತಲೇ ಇತ್ತು. ಈ ನಡುವೆ ಭಾನುವಾರ ಮಧ್ಯಾಹ್ನ ವೇಳೆ ಮನೆಯೊಳಗಡೆ ಮಲಗಿದ್ದ ಸಹೋದರಿ ಮತ್ತಾಕೆಯ ಪತಿಯ ತಲೆಗೆ ಮನೆಯೊಳಗೆ ಇದ್ದಂತಹ ಕಬ್ಬಿಣದ ರಾಡಿನಿಂದ ಬಡಿದು ಕೊಲೆಗೆ ಯತ್ನಿಸಿದ್ದಾರೆ. ಹಲ್ಲೆಯ ತೀವ್ರತೆಗೆ ಜೋಸೆಫ್ ಅವರ ಮೆದುಳು ಹೊರಬಂದಿದ್ದು, ಅವರನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾನೆಟ್ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಕೊಲೆ ಎಂದು ವದಂತಿ:
ಮನೆಯೊಳಗಡೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ದಂಪತಿಯನ್ನು ಆರೋಪಿ ಡೇನಿಸ್ ಕಿರಿಯ ಸಹೋದರ ಓಸ್ವಾಲ್ಡ್ ಅವರು ಮೊದಲಿಗೆ ನೋಡಿದ್ದಾರೆ. ಇಬ್ಬರನ್ನು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿಯನ್ನು ನೀಡಿದ್ದಾರೆ.
ಕಮೀಷನರ್ ಭೇಟಿ :
ಕೊಲೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳಕ್ಕೆ ಮಂಗಳೂರು ಕಮೀಷನರ್ ಟಿ.ಆರ್. ಸುರೇಶ್ ಭೇಟಿ ನೀಡಿದ್ದಾರೆ. ಆ ಬಳಿಕ ವಿಚಾರಣೆ ನಡೆಸಿದಾಗ ಕೊಲೆಯತ್ನ ಪ್ರಕರಣ ಎಂಬುದು ಗೊತ್ತಾಗಿದೆ. ಉಳ್ಳಾಲ ಪೊಲೀಸರಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಸ್ಥಳಕ್ಕೆ ಸಹಾಯಕ ಪೊಲೀಸ್ ಅಧೀಕ್ಷಕ ರಾಮ ರಾವ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಉಪನಿರೀಕ್ಷಕರುಗಳಾದ ವಿನಾಯಕ್ ತೋರಗಲ್, ಗುರುವಪ್ಪ ಕಾಂತ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.