ಸುಬ್ರಹ್ಮಣ್ಯ, ಅ 12: ಇಲ್ಲಿನ ಪರಿಸರದಲ್ಲಿ ವಿಪರೀತ ಮಳೆಯ ಹಿನ್ನೆಲೆ ಪಂಜ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಸಂಪರ್ಕ ಕಡಿತಗೊಂಡಿದೆ. ಕುಮಾರಧಾರ ನದಿಯ ಉಪನದಿ ದರ್ಪಣ ತೀರ್ಥ ನದಿ ನೀರು ಹೆಚ್ಚಾಗಿದ್ದು, ತುಂಬಿ ಹರಿಯುತ್ತಿದೆ. ಪರಿಣಾಮ ರಾಜ್ಯ ಹೆದ್ದಾರಿಗೆ ನದಿ ನೀರು ಆವರಿಸಿದ್ದು, ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆಯೂ ಕೂಡ ಸಂಪೂರ್ಣ ಜಲಾವೃತಗೊಳ್ಳುತ್ತಿದೆ. ವಿಪರೀತ ಮಳೆಯ ಹಿನ್ನೆಲೆ ಮಂಗಳೂರು-ಬೆಂಗಳೂರು ರೈಲು ಸಂಚಾರ ವ್ಯತ್ಯಯ ಆಗುವ ಸಾಧ್ಯತೆ ಇದೆ.
ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿನ್ನೆ ಮುಂಜಾನೆಯಿಂದ ವಿಪರೀತ ಮಳೆ ಸುರಿಯುತ್ತಿದ್ದು ಸುಬ್ರಹ್ಮಣ್ಯ ಸೇರಿದಂತೆ ಗುತ್ತಿಗಾರು, ಪಂಜ, ಬಳ್ಪ ಐನಕಿದು, ಬಾಳುಗೋಡು, ಕಲ್ಮಕಾರು, ಏನೆಕಲ್ ಮುಂತಾದ ಕಡೆಗಳಲ್ಲಿ ಭಾರೀ ಮಳೆ ಮಳೆಯಿಂದಾಗಿ ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ಅಲ್ಲದೆ ಘಟ್ಟ ಪ್ರದೇಶದಲ್ಲಿ ಹಾಗೂ ಕುಮಾರ ಪರ್ವತದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕುಮಾರಧಾರ ಹಾಗೂ ದರ್ಪಣ ತೀರ್ಥ ನದಿ ನೀರ ಹರಿವು ಹೆಚ್ಚಾಗಿದ್ದು ಸ್ನಾನಘಟ್ಟ ಮುಳುಗಡೆಯಾಗಿ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೆ ಮುಂಜಾನೆಯಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಕೃಷಿಕರ ತೋಟಗಳಿಗೆ ನೀರು ನುಗ್ಗಿ ಅಪಾರ ಕೃಷಿ ಹಾನಿಯಾಗಿದೆ.