ಕಾಸರಗೋಡು, ಅ 12: ಕಾರಿನಲ್ಲಿ ತುಂಬಿಸಿಡಲಾಗಿದ್ದ ಭಾರೀ ಪ್ರಮಾಣದ ತಂಬಾಕನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಕಾಸರಗೋಡಿನ ಬದಿಯಡ್ಕ ಠಾಣಾ ವ್ಯಾಪ್ತಿಯ ವಿದ್ಯಾಗಿರಿಯಲ್ಲಿ ನಡೆದಿದೆ. ಬಂಧಿತನನ್ನು ವಿದ್ಯಾಗಿರಿಯ ಅಬ್ದುಲ್ ಕು೦ಞಿ(41) ಎಂದು ಗುರುತಿಸಲಾಗಿದೆ.
ಮನೆ ಪರಿಸರದಿಂದ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕಾರಿನಲ್ಲಿ ಏಳು ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬದಿಯಡ್ಕ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದೆ. ಮನೆ ಪರಿಸರದಲ್ಲಿ ನಿಲ್ಲಿಸಿದ್ದ ಕಾರನ್ನು ತಪಾಸಣೆ ನಡೆಸಿದಾಗ 34,352 ಪ್ಯಾಕೆಟ್ ತಂಬಾಕು ಉತ್ಪನ್ನಗಳು ಪತ್ತೆಯಾಗಿದೆ. ಕೇರಳದಲ್ಲಿ ಪಾನ್ ಮಸಾಲ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ನಿಷೇಧಿಸ ಲಾಗಿದ್ದು, ಹೊರ ರಾಜ್ಯದಿಂದ ಅಕ್ರಮವಾಗಿ ಉತ್ಪನ್ನಗಳನ್ನು ತಂದು ದಾಸ್ತಾನಿರಿಸಿ ಬಳಿಕ ಅಂಗಡಿಗಳಿಗೆ ಈತ ಮಾರಾಟ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಒಣ ಮೀನಿನ ಹೆಸರಲ್ಲಿ ಈತ ತಂಬಾಕು ಉತ್ಪನ್ನಗಳನ್ನು ಸಾಗಾಟ ಮಾಡುತ್ತಿದ್ದಾಗ ಮಂಜೇಶ್ವರ ಮತ್ತು ಬದಿಯಡ್ಕ ಠಾಣಾ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದೀಗ ಮತ್ತೆ ತಂಬಾಕು ಉತ್ಪನ್ನಗಳನ್ನು ದಾಸ್ತಾನಿರಿಸಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.