ಬೆಳ್ತಂಗಡಿ, ಆ 12: ಕಸ್ತೂರಿರಂಗನ್ ವರದಿಗೆ ಸಂಬಂಧಿಸಿ ಎಲ್ಲಾ ರಾಜ್ಯಗಳು ಆಗಸ್ಟ್ 25 ರೊಳಗೆ ವಸ್ತುನಿಷ್ಟ ವರದಿಯನ್ನು ನೀಡುವಂತೆ ಸುಪ್ರೀಂಕೋರ್ಟ್ ಗಡುವು ನೀಡಿದ್ದರೂ ಕರ್ನಾಟಕ ಸರಕಾರ ವರದಿ ನೀಡುವಲ್ಲಿ ಮೀನಾಮೇಷ ಎಣಿಸುತ್ತಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆರೋಪಿಸಿದ್ದಾರೆ. ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ಬಗ್ಗೆ ಮಾತನಾಡಿದ ಅವರು, ಬೇರೆ ರಾಜ್ಯಗಳು ಈಗಾಗಲೇ ವರದಿಗೆ ಸಂಬಂಧಿಸಿ ಪ್ರಸ್ತಾವನೆಯನ್ನು ಸಲ್ಲಿಸಿದೆ. ಆದ್ರೆ ಕರ್ನಾಟಕ ಸರಕಾರ ಮಾತ್ರ ಗಾಢ ನಿದ್ರೆಯಲ್ಲಿದೆ ಎಂದು ಆರೋಪಿಸಿದರು.
ಪಶ್ಚಿಮ ಘಟ್ಟದ ಉಳಿವಿನ ಕುರಿತಾಗಿ ಕೇಂದ್ರ ಸರ್ಕಾರಕ್ಕೆ ಆ. 25 ರೊಳಗೆ ರಾಜ್ಯ ಸರಕಾರ ಅಭಿಪ್ರಾಯ ಮಂಡಿಸದಿದ್ದರೆ, ಡಾ|ಕಸ್ತೂರಿ ರಂಗನ್ ಸಮಿತಿಯ ವರದಿ ಯಥಾವತ್ ಅನುಷ್ಟಾನವಾಗಲಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ 17, ಪುತ್ತೂರಿನ 11, ಸುಳ್ಯದ 18 ಗ್ರಾಮಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಲ್ಲಿ ಸೇರುತ್ತವೆ. ಈ ಗ್ರಾಮಗಳನ್ನು ರಕ್ಷಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.