ಸುಬ್ರಮಣ್ಯ, ಆ 12: ಬೆಂಗಳೂರು, ಮೈಸೂರು, ಮಡಿಕೇರಿ ನಗರಗಳಿಗೆ ಹಾಗೂ ಕೇರಳಕ್ಕೆ ಸಂಪರ್ಕಿಸುವ ಕುಕ್ಕೆ ಸುಬ್ರಹ್ಮಣ್ಯ-ಜಾಲ್ಸೂರು-ಮೈಸೂರು ರಾಜ್ಯ ಹೆದ್ದಾರಿ 85ರ ಕಲ್ಲಾಜೆ ಬಳಿಯ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು ಯಾವುದೇ ಕ್ಷಣದಲ್ಲೂ ಕೂಡ ಕುಸಿದು ಬಿದ್ದು ಸಂಪರ್ಕ ಕಡಿತದ ಭೀತಿ ಎದುರಿಸುತ್ತಿದೆ. ವಿಪರೀತ ಮಳೆ ಕೂಡ ಸುರಿಯುತ್ತಿದ್ದು ಸಂಪರ್ಕ ಕಡಿತಕ್ಕೆ ಕ್ಷಣಗಣನೆ ಉಂಟಾಗಿದೆ. ಧಾರ್ಮಿಕ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರು-ಮೈಸೂರು-ಮಡಿಕೇರಿ-ಕುಶಾಲನಗರ, ಸುಳ್ಯ ಹಾಗೂ ಕೇರಳಕ್ಕೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ದಿನ ನಿತ್ಯ 50 ಕ್ಕೂ ಹೆಚ್ಚು ಟ್ರಿಪ್ ಸಾರಿಗೆ ಬಸ್ಗಳು ಮತ್ತು ಸಹಸ್ರಾರು ಖಾಸಗಿ ವಾಹನಗಳು ಪ್ರಯಾಣ ಬೆಳೆಸುತ್ತವೆ.
ಶಿರಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗಾಗಿ ಬಂದ್ ಆಗಿದ್ದ ವೇಳೆ ಇದೇ ರಸ್ತೆ ಬಳಕೆಯಲ್ಲಿತ್ತು. ಸುಬ್ರಹ್ಮಣ್ಯ-ಜಾಲ್ಸೂರು ಹೆದ್ದಾರಿಗೆ ತಾಗಿಕೊಂಡಿರುವ ಕಲ್ಲಾಜೆ -ಕೇದಿಗೆ ಬನದ ಶತಮಾನದಷ್ಟು ಹಳೆಯ ಸೇತುವೆ ಸಂಪೂರ್ಣ ಶಿಥಿಲವಾಗಿದೆ. ಸೇತುವೆಯ ಅಡಿಭಾಗದಲ್ಲಿ ಭಾರಿ ಬಿರುಕು ಕಾಣುತ್ತಿದೆ ಅಲ್ಲದೆ ಒಂದು ಭಾಗ ಸಂಪೂರ್ಣ ಸವೆದಿದೆ. ಸೇತುವೆಗೆ ಅಳವಡಿಸಿದ್ದ ಕಲ್ಲುಗಳು ಜರಿದು ಬಿದ್ದಿದೆ. ಯಾವುದೇ ಕ್ಷಣದಲ್ಲಿ ಸೇತುವೆ ಜರಿದು ಬಿದ್ದು ಭಾರಿ ದುರಂತಕ್ಕೆ ಕಾರಣವಾಗುವ ಸನ್ನಿವೇಶ ಇಲ್ಲಿ ಏರ್ಪಟ್ಟಿದೆ. ಕೂಡಲೇ ಸಂಬಂಧ ಪಟ್ಟ ಇಲಾಖೆ ಇತ್ತ ಕಡೆ ಗಮನಹರಿಸುವುದು ಒಳಿತು.