ಮಂಗಳೂರು, ಆ 12: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಇನ್ನೆರಡು ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.ಆಗಸ್ಟ್ 15 ರವರೆಗೂ ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ತೀವ್ರ ಮಳೆಯಾಗಲಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಆಯ್ದ ಭಾಗಗಳಲ್ಲಿ ಮಳೆ ಪ್ರಭಾವ ಹೆಚ್ಚು ಇರಲಿದೆ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಕಡಲಿಗಿಳಿಯದಂತೆ ಮೀನುಗಾರರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ನೆಚ್ಚರಿಕೆ ನೀಡಿದೆ.
ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಮಳೆ ಪ್ರಮಾಣದ ಸಾಧ್ಯತೆಯೂ ಶೇ. 50ರಿಂದ 75ರಷ್ಟಿದೆ. ಉತ್ತರ ಒಳನಾಡಿನಲ್ಲೂ ಮಳೆ ಆಗಲಿದೆ. ಆದರೆ, ಪ್ರಮಾಣ ತುಂಬಾ ಕಡಿಮೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ. ಈ ಮಧ್ಯೆ, ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶೃಂಗೇರಿಯ ಮಳಲಿಯ ಸುಶೀಲಾ ಹಾಗು ದಾವಣಗೆರೆಯ ಬಸವರಾಜು
ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಕೇರಳದ ವೈನಾಡು ಪ್ರದೇಶದಲ್ಲಿ ಹೆಚ್ಚಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಬಿನಿ ಜಲಾಶಯದ ಒಳ ಹರಿವು ಹೆಚ್ಚಿದ್ದು, ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪರಿಣಾಮ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಜನವಸತಿ ಪ್ರದೇಶ ಹಾಗೂ ರೈತರ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ.
ವಾರದ ಹಿಂದೆ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದ ಒಂದು ಗೇಟ್ನಿಂದ ಮಾತ್ರ ನೀರು ಹೊರ ಬಿಡಲಾಗುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಜಲಾಶಯದ ನಾಲ್ಕೂ ಕ್ರೆಸ್ಟ್ಗೇಟ್ಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ.