ಮರವಂತೆ, ಆ 12: ಪ್ರಕೃತಿಯ ರಮ್ಯಾದ್ಬುತ ಸ್ಥಳ ಮರವಂತೆಯ ಧಾರ್ಮಿಕತೆಯ ಮೇರು ಮೆಟ್ಟಿಲು ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ. ಕರ್ಕಾಟಕ ಅಮವಾಸ್ಯೆ ಜಾತ್ರೆ ಬಹಳ ಪ್ರಸಿದ್ಧ. ಈ ಬಾರಿಯ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಅಗಸ್ಟ್ 11ರಂದು ಶನಿವಾರ ನಡೆಯಿತು.
ಕ್ಷೇತ್ರ ಇತಿಹಾಸ :
ಮರವಂತೆಯ ಕ್ಷೇತ್ರ ಪುರಾಣ ವಿಶೇಷ ಸ್ಥಾನವಿದೆ. ಗತ ಪೂರ್ವದಲ್ಲಿ ದೇವೇಂದ್ರನು ಗೌತಮ ಋಷಿಯ ಪತ್ನಿ ಅಹಲ್ಯೆಯಲ್ಲಿ ಅನುರಕ್ತನಾಗಿ, ಕಾಮಾತುರತೆಯಿಂದ ಅಹಲ್ಯೆಯನ್ನು ಕೆಣಕಿ, ಗೌತಮ ಋಷಿಯ ಶಾಪಕ್ಕೀಡಾಗಿ ಭೂಲೋಕದ ಸೌಪರ್ಣಿಕ ನದಿಯ ತಟದಲ್ಲಿ ವಾಸಿಸುತ್ತಿದ್ದನು. ಆ ಸಮಯದಲ್ಲಿ ಗುಹೇಶ್ವರ ಲಿಂಗವನ್ನು ಪೂಜಿಸಿ ತಪಸ್ಸು ಮಾಡುತ್ತಾ, ಸಮಯ ಕಳೆದ ದೇವೇಂದ್ರ ಶಾಪ ವಿಮುಕ್ತಿಯಾದ ನಂತರ ಬ್ರಹಸ್ಪತಿ ಆಚಾರ್ಯರ ನೇತೃತ್ವದಲ್ಲಿ ಗಂಗಾಧರ ಲಿಂಗವನ್ನು ಸ್ಥಾಪಿಸಿ ಸ್ವರ್ಗಕ್ಕೆ ಮರಳಿದನು. ದೇವೇಂದ್ರ ಸ್ಥಾಪಿಸಿದ ಲಿಂಗವೇ ಈ ಗಂಗಾಧರೇಶ್ವರ ದೇವಸ್ಥಾನ.
ಪಯಸ್ವಿನಿ ನದಿ ತೀರದಲ್ಲಿ ಕ್ಷಾತ್ರ ವಂಶಸ್ಥನಾದ ರಾಜನೊಬ್ಬ ತನ್ನ ವಿಚಾರ ಹೀನತೆಯಿಂದ ಪುತ್ರ ಹತ್ಯೆಯ ಪಾಪಕ್ಕೊಳಗಾಗಿ ಅದರ ಪ್ರಾಯಶ್ಚಿತ್ತಕ್ಕಾಗಿ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಿ, ಗೋಕರ್ಣದಲ್ಲಿ ತಂಗಿರುವಾಗ ಆತನಿಗೆ ಸ್ವಪ್ನ ಸಂದೇಶವಾಗಿತ್ತದೆ. ನದಿ-ಸಮುದ್ರದ ಸಂಗಮದಲ್ಲಿ ಶ್ರೀ ಗಂಗಾಧರೇಶ್ವರ ದೇವಸ್ಥಾನವಿದೆ. ಆ ದೇವಸ್ಥಾನದ ದಕ್ಷಿಣಕ್ಕೆ ನೀನು ವರಾಹ, ವಿಷ್ಣು, ನರಸಿಂಹ ಮೂರು ಮೂರ್ತಿಗಳನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸುವಂತೆ ದೈವೀ ಪ್ರೇರಣೆಯಾಗುತ್ತದೆ. ಹಾಗೆ ಅರಸನು ಗುಹೇಶ್ವರ ದೇವರನ್ನು ಪೂಜಿಸಿ ದೈವ ಸತ್ವ ಮನ್ವಂತರದ 28ನೇ ಕಲಿಯುಗದ ಪ್ರಥಮ ಪಾದದಲ್ಲಿ 3300 ವರ್ಷ ಕಳೆಯುವ ಶುಕ್ಲ ಸಂವತ್ಸರದ ಉತ್ತರಾಯಣದ ವಸಂತ ಋತುವಿನ ವೈಶಾಖ ಶುದ್ಧ ತದಿಗೆ ಪೂರ್ವಾಹ್ನ ಗುರುವಾರ ವೃಷಭ ಲಗ್ನ ಚಂದ್ರ ಬೃಹಸ್ಪತಿ ಇರುವ (ಅಕ್ಷಯ ತದಿಗೆ) ಶುಭ ಮುಹೂರ್ತದಲ್ಲಿ ರಾಜನಿಂದ ಪ್ರತಿಷ್ಠಾಪಿಸಲ್ಪಟ್ಟ ದೇವಸ್ಥಾನ ಶ್ರೀ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ಎಂದೇ ಪ್ರಖ್ಯಾತಿ ಪಡೆದುಕೊಂಡಿದೆ.
ಅಭಾರಿ ಸೇವೆ :
ಇಲ್ಲಿಯ ಪ್ರಮುಖ ಹಾಗೂ ವಿಶೇಷವಾದ ಸೇವಾರಾಧನೆ ಕ್ರಮವೇ ಅಭಾರಿ. ಭಕ್ತರು ಸಕಾಲಕ್ಕೆ ಶ್ರೀವರಾಹ ದೇವರು ಮಳೆ, ಬೆಳೆಯನ್ನೊದಗಿಸಿ ತಮ್ಮನ್ನು ಪ್ರವಾಹಗಳಿಂದ ರಕ್ಷಿಸಿದ್ದಕ್ಕೆ ಮತ್ತು ಮೀನುಗಾರರು ಶ್ರೀ ವರಾಹ ದೇವರನ್ನು ಕೃಪಾಶೀರ್ವಾದಗಳಿಂದ ತಾವು ಮತ್ಸ್ಯೋದ್ಯಮದಲ್ಲಿ ಲಾಭಗಳಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ದೇವರಲ್ಲಿ ಚಿರರುಣಿಯಾಗಿದ್ದೇವೆ ದೇವರಿಗೆ ತಾವು ಅಬಾರಿಯಾಗಿದ್ದೇವೆ ಎಂಬ ಮನಭಾರವನ್ನು ಕೃತಜ್ಞತಾಪೂರ್ವಕವಾಗಿ ಈ ಸೇವೆ ನಡೆಸುತ್ತಾರೆ. ಈ ಕಾರ್ಯಕ್ರಮವನ್ನು ಪ್ರತೀ ಮೂರು ವರ್ಷಕ್ಕೊಮ್ಮೆ ನಾಡಾ ಹಡವು ಗ್ರಾಮಸ್ಥರಿಂದಲೂ ನಡೆಯಲ್ಪಡುತ್ತದೆ.
ಈ ಸೇವೆಯಲ್ಲಿ ಸಾವಿರ ಸಂಖ್ಯೆಯಲ್ಲಿ ಭಕ್ತ ಸಾಗರ ಸಾಧಾರಣ ನಾಲ್ಕು ಕಳಸಿನ ಅಕ್ಕಿಯ ಅನ್ನವನ್ನು ನಿಗಳನಿಗೆ (ಮೊಸಳೆ) ನೈವೇದ್ಯ ಸಮರ್ಪಿಸಲಾಗುತ್ತದೆ. ಒಂದು ಹಲಗೆಯ ಮೇಲೆ 41-ಅಗಳು ಅನ್ನ (ಎರಡು ಸಿದ್ದೆ ಅಕ್ಕಿ ಅನ್ನ)ಅನ್ನವನ್ನು ನೈವೇದ್ಯ ಮಾಡುತ್ತಾರೆ.
ಕರ್ಕಾಟಕ ಅಮಾವಾಸ್ಯೆ ಜಾತ್ರೆ :
ಪ್ರತೀ ವರ್ಷ ಆಶಾಢ ಬಹುಳ ಅಮವಾಸ್ಯೆಯನ್ನು ಬಹಳ ವಿಜೃಂಬಣೆಯಿಂದ ಜಾತ್ರೆ ನೆರವೇರುತ್ತದೆ. ಇದು ಮಧ್ಯ ಮಳೆಗಾಲದ ಆಶಾಢ ಮಾಸದ ಅಂತ್ಯದಲ್ಲಿ ಅಥವಾ ಮಧ್ಯಾಂತರದಲ್ಲಿ ಬರುವ ಹಬ್ಬ. ಜಟಿಜಟಿ ಮಳೆಯಾದರೂ ಭಕ್ತ ಕೋಟಿ ಯಾವುದೇ ಅಂಜಿಕೆ-ಆತಂಕವಿಲ್ಲದೆ ಭಕ್ತಿಯಿಂದ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಮಾತ್ರವಲ್ಲ ಸಮುದ್ರ ಸಾನ್ನದಲ್ಲಿ ಬಹು ಉತ್ಸಾಹದಿಂದ ತೊಡಗುತ್ತಾರೆ. ಇದು ಒಂದು ದೇವರ ಮಹಿಮಾ ಸಂಕೇತ ಪರ್ವ.
ಕರ್ಕಾಟಕ ಅಮವಾಸ್ಯೆಗೆ ನವ ದಂಪತಿಗಳು ನಾನಾ ಮೂಲದಿಂದ ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಶುದ್ಧಾಂತಕರಣ ಮನಸ್ಸಿನಿಂದ ಶ್ರೀ ದೇವರನ್ನು ಅರ್ಚಿಸಿ ಆರಾಧಿಸಿ ಪಾವನರಾಗುತ್ತಾರೆ. ಜನಸಾಗರವೇ ಹಬ್ಬದಲ್ಲಿ ನೆರೆದು ಸಮೀಪದ ಸಮುದ್ರಕ್ಕೆ ಸವಾಲು ಹಾಕುತ್ತದೆ. ಈ ಪರ್ವ ಕಾಲದಲ್ಲಿ ಸ್ಥಳೀಯರು, ಮೀನುಗಾರರು ಉತ್ಸಾಹದಿಂದಲೇ ಸ್ವಯಂ ಸೇವಕರಾಗಿ ದೇವರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ.
ಜಾತ್ರೆ ಮಾತ್ರವಲ್ಲದೆ ಪ್ರತಿ ಅಮವಾಸ್ಯೆ ದಿನ ಪ್ರೇತಾತ್ಮ ಸದ್ಗತಿಗಾಗಿ ಕುಷ್ಮಾಂಡ ಹಾಗೂ ತಿಲಾ ಹೋಮವನ್ನು ಮಾಡುತ್ತಾರೆ. ಇದಕ್ಕಾಗಿ ಪ್ರತ್ಯೇಕ ಕಟ್ಟಡ ವ್ಯವಸ್ಥೆ ಇದೆ. ದೇವರ ಮಹಿಮೆಯಿಂದ ತೃಪ್ತರಾದ ಭಕ್ತ ಸಮುದಾಯ ದೇವರಿಗೆ ಹಾರೈಕೆ ರೂಪದಲ್ಲಿ ಸಂದಾಯ ಮಾಡುತ್ತಾರೆ