ಮಂಡ್ಯ, ಆ.11: ನಾನು ರೈತ ಕುಟುಂಬದಲ್ಲಿ ಹುಟ್ಟಿದವನೇ, ನಾಟಿ ಮಾಡುವುದು ನನಗೆ ಹೊಸತಲ್ಲ. ಇದನ್ನು ರಾಜಕೀಯವಾಗಿ ತೆಗೆದುಕೊಂಡರೆ ನಾನು ಏನು ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದ ಸೀತಾಪುರದಲ್ಲಿ ಭತ್ತ ನಾಟಿ ಮಾಡಿ ಮಾತನಾಡಿದ ಅವರು, ರೈತರ ಋಣ ತೀರಿಸಲು ನಾನು ಸದಾ ಬದ್ದನಾಗಿದ್ದೇನೆ. ಗೌರಿ ಗಣೇಶ ಹಬ್ಬದೊಳಗಾಗಿ ನಾಡಿನ ಆರೂವರೆ ಕೋಟಿ ಜನರಿಗೂ ಸಿಹಿ ಸುದ್ದಿ ನೀಡುತ್ತೇನೆ. ರೈತರನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ರೈತರ ಸಮಸ್ಯೆಗೆ ವಿಧಾನಸೌಧದ ಬಾಗಿಲು ಸದಾ ತೆರೆದಿರುತ್ತದೆ. ನಾನು ನಿಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ನನಗೆ ಉತ್ತರ ಕರ್ನಾಟಕ ಬೇರೆ ಅಲ್ಲ. ದಕ್ಷಿಣ ಕರ್ನಾಟಕ ಬೇರೆ ಅಲ್ಲ. ಎರಡು ಒಂದೇ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನನ್ನ ಮೇಲೆ ನಂಬಿಕೆಯಿಡಿ. ಸಂಶಯ ಪಡಬೇಡಿ. ಮಂಡ್ಯ ಜಿಲ್ಲೆಯ ರೈತರ ಋಣ ನನ್ನ ಮೇಲೆ ಅಪಾರವಾಗಿದೆ. ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸಿದ್ದೀರಿ. ಏಳೇಳು ಜನ್ಮಕ್ಕೂ ಮಂಡ್ಯದ ಜನರ ಋಣ ತೀರಿಸಲಾಗದು ಎಂದು ಹೇಳಿದರು.