ಮಂಡ್ಯ, ಆ.11: ರಾಜ್ಯದ ರೈತ ವರ್ಗಕ್ಕೆ ಆತ್ಮಸ್ಥೈರ್ಯ ನೀಡುವ ಉದ್ದೇಶದಿಂದ ಸಿ.ಎಂ ಎಚ್.ಡಿ ಕುಮಾರಸ್ವಾಮಿ ಸ್ವತಃ ತಾವೇ ಗದ್ದೆಗಿಳಿದು ನಾಟಿ ಕಾರ್ಯ ಮಾಡಿ ಜನರ ಮನ ಗೆದ್ದಿದ್ದಾರೆ.
ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ರೈತಾಪಿ ವರ್ಗಕ್ಕೆ ಆತ್ಮಸ್ಥೈರ್ಯ ನೀಡುವ ಉದ್ದೇಶದಿಂದ ಸಿಎಂ ಎಚ್. ಡಿ ಕುಮಾರಸ್ವಾಮಿ ಈ ಕಾರ್ಯ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರದ ಐದೂವರೆ ಎಕರೆ ಜಮೀನಿನಲ್ಲಿ 100 ಗಂಡಸರು ಹಾಗೂ 50 ಹೆಂಗಸರು ಭತ್ತ ನಾಟಿ ಮಾಡುವ ಮೂಲಕ ಸಿಎಂಗೆ ಸಾಥ್ ನೀಡಿದ್ದಾರೆ.
ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ವತಃ ತಾವೇ ಗದ್ದೆಗಿಳಿದು ನಾಟಿ ಕಾರ್ಯ ಮಾಡುವ ಮೂಲಕ ತಾವು ಮಣ್ಣಿನ ಮಗ ಎಂಬುದನ್ನು ಸಾಬೀತು ಮಾಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಬದಿಗಿಟ್ಟು ಗದ್ದೆಗಿಳಿದು ಭತ್ತನಾಟಿ ಮಾಡಿರುವ ಸಿಎಂ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ವೇಳೆ ಮಾತನಾಡಿದ ಅವರು, ಈ ಬಾರಿ ತಾಯಿ ಚಾಮುಂಡಿ ನಮ್ಮ ಮೇಲೆ ದಯೆ ತೋರಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಗೌರಿ-ಗಣೇಶ ಹಬ್ಬದೊಳಗೆ ರೈತರಿಗೆ ಸಿಹಿ ಸುದ್ದಿ ನೀಡುತ್ತೇನೆ. ಕೇವಲ 37 ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಸಹ ನಾನು ಸಿಎಂ ಆಗಿದ್ದೇನೆ. ರೈತರನ್ನು ನಾನು ಕೈ ಬಿಡುವುದಿಲ್ಲ. ನನಗೆ ನಗರ ಬೇರೆ ಅಲ್ಲ, ಗ್ರಾಮೀಣ ಪ್ರದೇಶ ಬೇರೆ ಅಲ್ಲ. ರೈತರಿಗೆ ಮುಂದಿನ ದಿನಗಳಲ್ಲಿ ಸಿಹಿ ಸುದ್ದಿ ನೀಡುತ್ತೇನೆ ಎಂದು ಭರವಸೆ ನೀಡಿದರು.