ಮಂಗಳೂರು, ಆ.11: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪಾಡಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಕೆಎಸ್ಆರ್ಟಿಸಿ ಬಸ್ಸು ಕೊಲ್ಯದ ಅಡ್ಕ ಬಳಿ ಡಿಕ್ಕಿ ಹೊಡೆದಿದೆ.
ಕೊಟ್ಟಾರ, ಜ್ಯೋತಿ, ಕೋಣಾಜೆ ಮೂಲಕ ತೆರಳುವ 51 ನಂಬರಿನ ಬಸ್ಸು ಹೆದ್ದಾರಿ ಮೂಲಕ ಮಂಗಳೂರಿಗೆ ಬರುತ್ತಿತ್ತು. ಪ್ರಯಾಣಿಕರನ್ನು ಹತ್ತಿಸಿಕೊಳ್ಳಲೆಂದು ಅಡ್ಕ ಬಳಿ ನಿಂತಿತ್ತು. ಇದೇ ವೇಳೆ ಕಾಸರಗೋಡಿನಿಂದ ಬರುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಖಾಸಗಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಲವು ಮಂದಿಗೆ ಗಾಯಗಳಾಗಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರೀ ಮಳೆಯಿಂದಾಗಿ ಅತೀ ವೇಗದಲ್ಲಿ ಬರುತ್ತಿದ್ದ ಬಸ್ಸಿನ ಚಾಲಕ ನಿಯಂತ್ರಣ ಕಳೆದುಕೊಂಡಿರುವುದು ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಖಾಸಗಿ ಬಸ್ಸಿನ ಹಿಂಭಾಗ ಮತ್ತು ಕೆಎಸ್ಆರ್ಟಿಸಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕ್ರೇನ್ ಮೂಲಕ ಇವುಗಳನ್ನು ಹೆದ್ದಾರಿ ಪಕ್ಕದಲ್ಲಿ ನಿಲುಗಡೆಗೊಳಿಸಲಾಯಿತು.
ಈ ಸಂದರ್ಭ ಮಂಗಳೂರಿಗೆ ಬರುತ್ತಿದ್ದ ಹಲವು ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ಹೊರ ರೋಗಿಗಳನ್ನಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಪೊಲೀಸರು ಆಗಮಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದ್ದಾರೆ.