ಉಡುಪಿ, ಆ.11: ಕೃಷ್ಣ ನಗರಿ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶರಾಗಿದ್ದು, ಶ್ರೀಗಳ ಸ್ಮರಣಾರ್ಥ ಶ್ರೀ ಕೃಷ್ಣಾಷ್ಟಮಿ - ವಿಟ್ಲಪಿಂಡಿಯ ಪ್ರಯುಕ್ತ ಹುಲಿ ವೇಷ ಸ್ಪರ್ಧೆಯೊಂದನ್ನು ಆಯೋಜಿಸಲು ಭಕ್ತರು ನಿರ್ಧರಿಸಿದ್ದಾರೆ.
ಸ್ಪರ್ಧೆಯ ಕುರಿತಂತೆ ಇಂದು (ಆಗಸ್ಟ್ 11) ಸಂಜೆ 5 ಗಂಟೆಗೆ ಸಮಾಲೋಚನಾ ಸಭೆಯನ್ನು ರಾಜಾಂಗಣದ ಪಾರ್ಕಿಂಗ್ ಬಳಿ ಇರುವ ಮಥುರಾ ಛತ್ರದ ಹಾಲ್ನಲ್ಲಿ ಕರೆಯಲಾಗಿದೆ. ಮಾತ್ರವಲ್ಲ ಆಸಕ್ತರು, ಶ್ರೀಗಳ ಸ್ಮರಣಾರ್ಥವಾಗಿ ಆಯೋಜಿಸಿರುವ ಈ ಹುಲಿವೇಷ ಸ್ಪರ್ಧೆಯಲ್ಲಿ ಶಿರೂರು ಶ್ರೀಗಳ ಅಭಿಮಾನಿಗಳು ಭಾಗವಹಿಸುವಂತೆ ಕೋರಲಾಗಿದೆ.
ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಶಿರೂರು ಶ್ರೀಗಳು ಉಡುಪಿಯಲ್ಲಿ ಜನಸಾಮಾನ್ಯರ ಸ್ವಾಮೀಜಿ ಎಂದೇ ಹೆಸರು ಗಳಿಸಿದ್ದರು. ಸಂಗೀತ, ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಶಿರೂರು ಶ್ರೀಗಳು ತನ್ನ ಎರಡು ಅವಧಿಯ ಪರ್ಯಾಯದಲ್ಲಿ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಹಾಗೂ ಅವ್ಯವಹಾರ ತಡೆಯುವಲ್ಲೂ ಯಶಸ್ವಿಯಾಗಿದ್ದರು. ಮಾತ್ರವಲ್ಲ, ಹುಲಿವೇಷದಂತಹ ಜಾನಪದ ಕಲೆಗಳಲ್ಲಿ ಶ್ರೀಗಳಿಗೆ ಅಪಾರ ಆಸಕ್ತಿ ಇತ್ತು. ಇದೇ ಕಾರಣದಿಂದ ಕೃಷ್ಣ ನಗರಿ ಉಡುಪಿಯಲ್ಲಿ ಶ್ರೀಗಳ ಸ್ಮರಣಾರ್ಥವಾಗಿ ಶ್ರೀ ಕೃಷ್ಣಾಷ್ಟಮಿ - ವಿಟ್ಲಪಿಂಡಿಯ ಪ್ರಯುಕ್ತ ಹುಲಿ ವೇಷ ಸ್ಪರ್ಧೆಯೊಂದನ್ನು ಆಯೋಜಿಸಲು ಭಕ್ತರು ನಿರ್ಧರಿಸಿದ್ದಾರೆ.