ಬಂಟ್ವಾಳ, ಆ.11: ಮೈಸೂರು ನಗರದ ಕೆ.ಆರ್.ಆಸ್ಪತ್ರೆ ಆವರಣದ ಬಿ.ಎಸ್.ಸಿ ಶುಶ್ರೂಕಿಯರ ನಿಲಯಕ್ಕೆ ಅಕ್ರಮವಾಗಿ ನುಗ್ಗಿ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ, ಒಳ ಉಡುಪು ಕದ್ದು ಆತಂಕ ಸೃಷ್ಟಿಸಿದ್ದ ಬಂಟ್ವಾಳದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಂಟ್ವಾಳದ ಮಣಿನಾಲ್ಕೂರು ಗ್ರಾಮದ ಮಹಮ್ಮದ್ ಅಲ್ತಾಫ್ (23) ಎಂದು ಗುರುತಿಸಲಾಗಿದೆ. ಜು. 20ರ ತಡರಾತ್ರಿ ಮೈಸೂರು ನಗರದ ಕೆ.ಆರ್.ಆಸ್ಪತ್ರೆ ಆವರಣದ ಬಿ.ಎಸ್.ಸಿ ಶುಶ್ರೂಕಿಯರ ನಿಲಯಕ್ಕೆ ಅಕ್ರಮವಾಗಿ ಒಳ ನುಗ್ಗಿ, ಸೆಕ್ಯೂರಿಟಿ ಗಾರ್ಡ್ಗೆ ಚಾಕು ತೋರಿಸಿ, ಮಲಗಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.
ಮೈಸೂರಿನ ವಿದ್ಯಾರ್ಥಿನಿಯರ ಹಾಸ್ಟೆಲ್ ಒಳಗೆ ನುಗ್ಗಿ ಒಳ ಉಡುಪು ಕದ್ದ ಹಾಗೂ ಲೈಂಗಿಕ ಕಿರುಕುಳ ನೀಡಿದ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರಿನ ದೇವರಾಜ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇದೀಗ ಕೇರಳದ ಕೊಟ್ಟಾಯಂ ಜಿಲ್ಲೆಯ ಪುದುಕೊಳ್ಳಿ ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡು ತಲೆ ಮರೆಸಿಕೊಂಡಿದ್ದ ಆರೋಪಿ ಮಹಮ್ಮದ್ ಅಲ್ತಾಫ್ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.