ಕುಂದಾಪುರ, ಅ 10: ಸಾರಿಗೆ ಇಲಾಖೆಯಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗದೆ ಬಾಕಿ ಇರುವುದರಿಂದಾಗಿ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಉಳಿದುಕೊಂಡಿದೆ. ಸದ್ಯ ಯಾವುದೆ ಹೊಸ ಸ್ಥಳದಲ್ಲಿ ಆರ್ಟಿಓ ಕಚೇರಿಗಳನ್ನು ಸ್ಥಾಪನೆ ಮಾಡಿದ್ದಲ್ಲಿ ಅದರ ನಿರ್ವಹಣೆ ಅಸಾಧ್ಯ ಎನ್ನುವ ಕಾರಣಕ್ಕಾಗಿ ರಾಜ್ಯದಲ್ಲಿ ಯಾವುದೇ ಹೊಸ ಕಚೇರಿ ಸ್ಥಾಪನೆಯ ಪ್ರಾಸ್ತಾವನೆ ಇಲ್ಲ ಎಂದು ರಾಜ್ಯ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.
ಶುಕ್ರವಾರ ಕುಂದಾಪುರದ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಅರ್ಚಕರ ಮೂಲಕ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮಂಗಳೂರಿನ ಆರ್ಟಿಓ ಕಚೇರಿಗೆ 31 ಜನರ ಅಗತ್ಯವಿದ್ದರೂ ಅಲ್ಲಿ ಕೇವಲ 14 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೇಮಕಾತಿಗೆ ಸಂಬಂಧಿಸಿದಂತೆ ಕಳೆದ 4 ವರ್ಷಗಳಿಂದ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದಾಗಿ 400ಕ್ಕೂ ಮಿಕ್ಕಿ ಹುದ್ದೆಗಳು ಭರ್ತಿಯಾಗದೆ ಉಳಿದುಕೊಂಡಿದೆ. ಹುದ್ದೆಗಳು ಭರ್ತಿಯಾಗುತ್ತಿದ್ದಂತೆ ಆದ್ಯತೆಯ ಮೇರೆಗೆ ಎಆರ್ಟಿಓ ಹಾಗೂ ಆರ್ಟಿಓ ಕಚೇರಿಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಬೈಂದೂರಿನಲ್ಲಿ 5 ಕೋಟಿ ವೆಚ್ಚದಲ್ಲಿ ಸರ್ಕಾರಿ ಬಸ್ಸು ನಿಲ್ದಾಣ ಹಾಗೂ ಡಿಪೋ ಕಾಮಗಾರಿ ನಡೆಯಲಿದೆ. ಕರಾವಳಿ ಭಾಗದಲ್ಲಿ ಸಾರ್ವಜನಿಕ ಬೇಡಿಕೆಗೆ ಅನುಗುಣವಾಗಿ ಸಾರಿಗೆ ವ್ಯವಸ್ಥೆಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ವಾಣಿಜ್ಯ ದೃಷ್ಟಿಯಿಂದ ನಿಗಮಕ್ಕೆ ಅನೂಕೂಲವಿಲ್ಲದೆ ಇದ್ದರೂ, ಸಾರ್ವಜನಿಕ ಉಪಯೋಗಕ್ಕಾಗಿ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ ಓಡಾಟಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಹೊಸ ಬಸ್ ಓಡಾಟಕ್ಕೆ ಕ್ರಮ:
78 ಲಕ್ಷ ಕಿ.ಮೀ ದೂರ ಪ್ರಯಾಣ ಮಾಡಿದ ಬಸ್ಸುಗಳ ಓಡಾಟವನ್ನು ಸ್ಥಗಿತಗೊಳಿಸಲಾಗುತ್ತದೆ. ಕೆಲವೊಮ್ಮೆ 78 ಲಕ್ಷ ದಾಟಿದ ಬಸ್ಸುಗಳು ಸುವ್ಯವಸ್ಥಿತ ಸ್ಥಿತಿಯಲ್ಲಿ ಇದಲ್ಲಿ, ಕೆಲವು ಮಾರ್ಪಾಡುಗಳನ್ನು ಮಾಡಿ ಹೆಚ್ಚುವರಿ 5 ಲಕ್ಷ ಕಿ.ಮೀ. ಓಡಾಟ ನಡೆಸಲಾಗುತ್ತದೆ. ಅಗತ್ಯವಿರುವ ಕಡೆ 100 ಹೊಸ ಸ್ಲೀಪರ್ಕೋಚ್ ಬಸ್ಸುಗಳ ಓಡಾಟಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.