ಉಡುಪಿ,ಅ 1: ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ರವಿವಾರ ಉಡುಪಿಯ ಎಮ್ ಜಿ ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಿರಿಯರನ್ನು ಗೌರವಿಸುವ ಹಾಗೂ ಪ್ರೀತಿಸುವ ಮನೋಭಾವ ವಾತಾವರಣ ಪ್ರತಿ ಮನೆಯಲ್ಲಿ ನಿರ್ಮಾಣವಾಗಬೇಕಾದ ಅಗತ್ಯವಿದೆ. ಹಿರಿಯರನ್ನು ಕೇವಲ ಸಭೆ ಸಮಾರಂಭಗಳಲ್ಲಿ ಸನ್ಮಾನಿಸುವ ಆಚಾರವನ್ನು ಇಟ್ಟುಕೊಳ್ಳದೇ ಪ್ರತಿ ಮನೆ ಮನೆಯ ಯುವಕರಿಗೆ ತಮ್ಮ ಹಿರಿಯರನ್ನು ಗೌರವಿಸುವ ಹಾಗೂ ಪ್ರೀತಿಸಲು ವಿನಯತೆ ಬಂದಾಗ ಮಾತ್ರ ಇಡೀ ದೇಶದಲ್ಲಿ ರಾಮರಾಜ್ಯ ಕಾಣಲು ಸಾದ್ಯ ಎಂದು ಹೇಳಿದರು . ಇಂದಿನ ಯುವಕ –ಯುವತಿಯರು ತಮ್ಮ ಹೆತ್ತ ತಂದೆ ತಾಯಿಗೆ ಆಸ್ತಿ ವಿಚಾರದಲ್ಲಿ ಕಿರುಕುಳ ನೀಡಿ ಮನೆಯಿಂದ ಹೊರಗಟ್ಟಿದ ನಿದರ್ಶನಗಳು ನಮ್ಮ ಮುಂದಿವೆ. ತಂದೆ ತಾಯಿಯನ್ನು ಹೊರಗಟ್ಟಿದ ಮಕ್ಕಳಿಗೆ ಮುಂದೆ ಅವರ ಮಕ್ಕಳು ಮನೆಯಿಂದ ಹೊರಗಟ್ಟಿದ ನಿದರ್ಶನಗಳು ನಡೆದಿವೆ.ಹಿರಿಯ ನಾಗರೀಕರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ, ಹಿರಿಯ ನಾಗರೀಕರನ್ನು ಗೌರವಿಸುವ ಹಾಗೂ ಪ್ರೀತಿಸುವ ಮನೋಭಾವನ್ನು ಚಿಕ್ಕದಿನಿಂದಲೇ ಮಕ್ಕಳಿಗೆ ಹೆತ್ತವರು ಕಲಿಸಬೇಕು ಎಂದರು.
ಸಿವಿಲ್ ಹಿರಿಯ ನ್ಯಾಯಾದೀಶೆ ಲತಾ ಈ ಸಂದರ್ಭ ಮಾತನಾಡಿ, ನಮ್ಮನ್ನು ಹೆತ್ತು ಲಾಲನೆ ಪಾಲನೆ ಮಾಡಿದ ನಮ್ಮ ಹಿರಿಯ ತಂದೆ ತಾಯಿಗಳನ್ನು ಗೌರವಿಸುವ ಮನೋಭಾವ ನಮ್ಮಲ್ಲಿರಬೇಕು. 60 ವರ್ಷ ದಾಟಿದ ಬಳಿಕ ಹಿರಿಯ ನಾಗರೀಕರ ಮನಸ್ಸು ಮಕ್ಕಳಿಗಿಂತ ಸೂಕ್ಷ ರೂಪದಾಗಿರುತ್ತದೆ. ಅವರಲ್ಲಿ ಅಭದ್ರತೆಯ ಮನೋಭಾವ ಹುಟ್ಟಿಕೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಅವರನ್ನು ಮಕ್ಕಳಿಗಿಂತ ಹೆಚ್ಚಾಗಿ ಹಾರೈಕೆ ಮಾಡಬೇಕು ಎಂದರು. ಸಮಾರಂಭದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ನಾಗರೀಕರನ್ನು ಸನ್ಮಾನಿಸಿ ಗೌರವಿಸಲಾಯಿತು .ಜಿಲ್ಲಾ ವಿಕಲ ಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ-ನಿರಂಜನ್ ಭಟ್ , ಉಡುಪಿ ಜಿಲ್ಲಾ ಹಿರಿಯ ನಾಗರಿಕ ಒಕ್ಕೂಟದ ಅಧ್ಯಕ್ಷ- ಎ ಪಿ ಕೊಡಂಚ , ತಾಲೂಕು ಪಂಚಾಯತ್ ಅಧ್ಯಕ್ಷೆ- ನಳಿನಿ ಪ್ರದೀಪ್ ರಾವ್ ಮೊದಲಾದವರು ಉಪಸ್ಥಿತರಿದ್ದರು.