ಮಂಗಳೂರು, ಆ10: ಅನೇಕ ಪವಾಡಗಳಿಗೆ ಸಾಕ್ಷಿಯಾದ ಮತ್ತು ಸಂತ ಲಾರೆನ್ಸರಿಗೆ ಸಮರ್ಪಿಸಿದ ಬೋಂದೆಲ್ನ ಪುಣ್ಯಕ್ಷೇತ್ರದಲ್ಲಿ ಇಂದು ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು.
ಬೆಳಗ್ಗೆ 10 ಗಂಟೆಗೆ ಸಂತ ಲಾರೆನ್ಸರ ಪುಣ್ಯಕ್ಷೇತ್ರದಲ್ಲಿ ಮಂಗಳೂರು ಬಿಷಪ್ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ನೇತೃತ್ವದಲ್ಲಿ ಬಲಿಪೂಜೆ ಜರಗಿತು. ಈ ವೈಭವದ ಬಲಿಪೂಜೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾದರು.
ಇದೇ ವೇಳೆ ಭಕ್ತರಿಗಾಗಿ ವಿಶೇಷ ಪ್ರಾರ್ಥನೆ ಕೂಡ ಸಲ್ಲಿಸಲಾಯಿತು. ಕಳೆದ 10 ದಿನಗಳಿಂದ ಹಬ್ಬದ ಸಂಭ್ರಮ ಆರಂಭಗೊಂಡಿದ್ದು, 9 ದಿನಗಳ ನೊವೆನಾ ಪ್ರಾರ್ಥನೆ ಬಳಿಕ ಇಂದು ವಾರ್ಷಿಕೋತ್ಸವ ನಡೆಸಲಾಯಿತು. ಬೋಂದೆಲ್ ವಲಯದ ವಿವಿಧ ಚರ್ಚ್ಗಳ 20ಕ್ಕೂ ಅಧಿಕ ಧರ್ಮಗುರುಗಳು, ಧರ್ಮಭಗಿಣಿಯರು ವಿಶೇಷ ಬಲಿಪೂಜೆಯಲ್ಲಿ ಭಾಗಿಗಳಾದರು. ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು.
ಸಂತ ಲಾರೆನ್ಸರ ಪುಣ್ಯಕ್ಷೇತ್ರದಲ್ಲಿ ಇಂದು ಸಂಜೆ 6 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ನಿಯೋಜಿತ ಬಿಷಪ್ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನಾ ನೇತೃತ್ವದಲ್ಲಿ ಬಲಿಪೂಜೆ ನೆರವೇರಲಿದೆ.