ತಿರುವನಂತಪುರಂ, ಆ10: ವಾಯುಭಾರ ಕುಸಿತದಿಂದಾಗಿ ಹವಾಮಾನ ಬದಲಾಗಿ ಕರ್ನಾಟಕ ಮತ್ತು ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ.
ಕೇರಳದಲ್ಲಿ ಹೆಚ್ಚಾಗಿರುವ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆ ಆಗಿದೆ. ಪರಿಸ್ಥಿತಿಯ ನಿಯಂತ್ರಣಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆರು ತಂಡಗಳನ್ನು ನಿಯೋಜಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದೆ. ನಾಲ್ಕು ಹೆಚ್ಚುವರಿ ತಂಡಗಳನ್ನು ಕೋಝಿಕೋಡು ಬಳಿ ನಿಯೋಜಿಸಲಾಗುತ್ತಿದೆ.
ಈಗಾಗಲೇ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿವೆ. ಕಬಿನಿ ಜಲಾಶಯದಲ್ಲಿ ನೀರಿನ ಒಳಹರಿವು ಅಧಿಕವಾಗಿದ್ದು, ಸದ್ಯ 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಹೊರ ಹರಿವು 1 ಲಕ್ಷ ಕ್ಯೂಸೆಕ್ ದಾಟುವ ಸಾಧ್ಯತೆ ಇದ್ದು, ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ದೆಹಲಿಯಲ್ಲಿರುವ ಎನ್ ಡಿಆರ್ ಎಫ್ ಸಹಾಯವಾಣಿ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದು, ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ ಕೇರಳದಲ್ಲಿ ಕೆಲ ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಹಾಮಳೆಯ ದುರಂತದ ಹಿನ್ನೆಲೆಯಲ್ಲಿ, ಕೇರಳ ಜನರ ಭುಜದೊಂದಿಗೆ ಭುಜ ಕೊಡುವುದಾಗಿ ಮೋದಿ ಟ್ವೀಟ್ ಮಾಡಿದ್ದಾರೆ. ಜೊತೆಗೆ, ಸಂಕಷ್ಟದಲ್ಲಿರುವ ಕೇರಳ ರಾಜ್ಯಕ್ಕೆ ಎಲ್ಲಾ ಅಗತ್ಯ ನೆರವು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರಿಗೆ ಹೇಳಿದ್ದಾರೆ.