ಮಂಗಳೂರು, ಆ10: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಹವಾಮಾನ ಬದಲಾಗಿ ಮತ್ತೆ ಕರಾವಳಿಯಲ್ಲಿ ವರುಣ ಅಬ್ಬರಿಸಲು ಆರಂಭಿಸಿದ್ದಾನೆ.
ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಲಿದ್ದು, ಕರಾವಳಿಯಲ್ಲಿ 35 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಮಹಾಮಳೆ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಮಂಗಳೂರು, ಸುರತ್ಕಲ್, ಕಾಪು, ಮುಲ್ಕಿ, ವೇಣೂರು, ನಾರಾವಿ ಭಾಗದಲ್ಲೂ ರಾತ್ರಿಯಿಂದ ವರುಣ ಅಬ್ಬರಿಸುತ್ತಿದ್ದಾನೆ. ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯಾ, ಶಿರಾಡಿ, ಸುಬ್ರಹ್ಮಣ್ಯ ಸೇರಿದಂತೆ ಘಟ್ಟದ ತಪ್ಪಲಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಗುಂಡ್ಯ ಸಮೀಪದ ಉದನೆ ಎಂಬಲ್ಲಿ ಹೊಳೆ ತುಂಬಿ ಹರಿಯುತ್ತಿದ್ದು, ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೇತುವೆಯಲ್ಲಿ ಕೃತಕ ನೆರೆ ಉಂಟಾಗಿದೆ. ಬೆಳ್ತಂಗಡಿ , ಸುಳ್ಯ ಭಾಗದಲ್ಲಿ ಹಲವೆಡೆ ಕೃಷಿ ಜಮೀನಿಗೆ ಮಳೆ ನೀರು ನುಗ್ಗಿದೆ. ಗ್ರಾಮೀಣ ಭಾಗದ ಕೆಲ ಮನೆಗಳಿಗೆ ನೆರೆ ನೀರು ಆವರಿಸಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆ ಕಳೆದ 24 ಗಂಟೆಯಿಂದ ಮುಳುಗಡೆಯಾಗಿದೆ.
ಕುಮಾರಧಾರಾ ಮತ್ತು ನೇತ್ರಾವತಿ ನದಿಯೂ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ. ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿರುವುದರಿಂದ ಶ್ರೀ ಕ್ಷೇತ್ರದ ಸ್ನಾನ ಘಟ್ಟ ಮುಳುಗಡೆಯಾಗಿದೆ. ಪರಿಣಾಮ, ಯಾತ್ರಿಕರು ಸಂಕಷ್ಟ ಪಡುವಂತಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದೆ.