ಮಂಗಳೂರು, ಅ 9: ನಗರದ ಬೊಂದೇಲ್ ಚರ್ಚ್ ಬಳಿ ನಿಲ್ಲಿಸಿದ್ದ ಎರಡು ಕಾರುಗಳಿಂದ ಬೆಲೆಬಾಳುವ ವಸ್ತುಗಳನ್ನು ಹಾಡುಹಗಲೇ ಕಳ್ಳತನ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಅಪ್ರಾಪ್ತ ವಯಸ್ಕನಾಗಿರುವ ಆರೋಪಿ ಅಗಸ್ಟ್ 5ರ ಭಾನುವಾರದಂದು ಎರಡು ಕಾರುಗಳಿಂದ ಕಳ್ಳತನ ನಡೆಸಿದ್ದ. ಆರೋಪಿಯ ಚಲನಾವಲನಗಳು ಪಕ್ಕದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಆರೋಪಿ ಮತ್ತೆ ಅಗಸ್ಟ್ 9ರ ಗುರುವಾರದಂದು ಅದೇ ಪ್ರದೇಶಕ್ಕೆ ಆಗಮಿಸಿ ಮತ್ತೆ ಕಳ್ಳತನಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಈ ಸಂದರ್ಭ ಗಮನಿಸಿದ ಭಕ್ತರು ಆರೋಪಿಯನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಆರೋಪಿ ತಾನು ನಡೆಸಿರುವ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಈತನನ್ನು ಕಾವೂರು ಠಾಣಾ ಪೊಲೀಸರಿಗೆ ಹಸ್ತಾಂತರಿಸಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಇನ್ನು ಬಜ್ಪೆ ನಿವಾಸಿ ಸುನೀಲ್ ವಾಲ್ಡರ್ ಅವರ ಒಮಿನಿ ಕಾರಿನಿಂದ ನಗದು ಹಣ 400 ದಿರಮ್, ಭಾರತ ಹಾಗೂ ದುಬೈ ನ ಡ್ರೈವಿಂಗ್ ಲೈಸನ್ಸ್, ದುಬೈ ಎಮಿರೇಟ್ಸ್ ಐಡಿ, ಕ್ರೆಡಿಟ್ ಕಾರ್ಡ್ ಮುಂತಾದವುಗಳನ್ನು ಕದ್ದೊಯ್ದಿದ್ದ. ಇನ್ನು ಕೆನ್ಯೂಟ್ ಪಿಂಟೋ ಅವರ ಮಾಲೀಕತ್ವದ ಅಲ್ಟೋ ಕಾರಿನ ಕಿಟಕಿಯ ಗಾಜು ಒಡೆದು, ನಗದು ಹಾಗೂ ಪವರ್ ಬ್ಯಾಂಕ್ ಕಳವು ಮಾಡಿದ್ದ. ಬೊಂದೇಲ್ ಚರ್ಚ್ ನ ವಾರ್ಷಿಕೋತ್ಸವ ನಡೆಯುತ್ತಿರುವ ಕಾರಣ ಸಾವಿರಾರು ಭಕ್ತರು ಚರ್ಚ್ ಗೆ ಆಗಮಿಸಿದ್ದು ಈ ಹಿನ್ನಲೆಯಲ್ಲಿ ಹಲವು ಕಾರುಗಳನ್ನು ಚರ್ಚ್ ಮುಂಭಾಗದಲ್ಲಿರುವ ಏರ್ ಪೋರ್ಟ್ ರಸ್ತೆಯ ಇಕ್ಕೆಲಗಳಲ್ಲಿ ಪಾರ್ಕ್ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಹೊಂಚು ಹಾಕಿದ್ದ ಕಳ್ಳ ತನ್ನ ಕೈಚಳಕ ತೋರಿದ್ದಾನೆ. ಒಮಿನಿ ಕಾರಿನಿಂದ ವ್ಯಕ್ತಿಯೋರ್ವ ಕಳ್ಳತನ ಮಾಡಿರುವುದನ್ನು ಗಮನಿಸಿದ ರಿಕ್ಷಾ ಚಾಲಕ ಆತನನ್ನು ಬೆನ್ನಟ್ಟಿದರೂ ಕಳ್ಳ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.