ಬಂಟ್ವಾಳ, ಅ 9: ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿರುವುದನ್ನು ಬಂಟ್ವಾಳ ನಗರ ಪೊಲೀಸರು ಗುರುವಾರ ಜಕ್ರಿಬೆಟ್ಟು ಬಳಿ ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ವಾಹನ ಚಾಲಕ ಹಾಗೂ ಮದ್ವ, ಬಾಂಬಿಲ ನಿವಾಸಿ ಸಂಸೀರ್ ಎಂಬವರನ್ನು ಬಂಧಿಸಲಾಗಿದೆ.
850 ಕೆ.ಜಿ. ಗೋ ಮಾಂಸ, ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿದ್ದಾರೆ. ಖಚಿತ ಮಾಹಿತಿಯನ್ವಯ ಪುಂಜಾಲಕಟ್ಟೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಪಿಕಪ್ ವಾಹನವನ್ನು ಜಕ್ರಿಬೆಟ್ಟುವಿನಲ್ಲಿ ಪೊಲೀಸರು ತಡೆದು ಪರಿಶೀಲಿಸಿದಾಗ ಇದರಲ್ಲಿ ದನದ ಮಾಂಸ ಕಂಡು ಬಂದಿದ್ದು, ತಕ್ಷಣ ವಾಹನ ಚಾಲಕ ಅಬ್ದುಲ್ ಜಬ್ಬಾರ್, ಇನ್ನೊಬ್ಬ ವ್ಯಕ್ತಿ ಸಂಸೀರ್ ನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ವಿಚಾರಿಸಿದಾಗ ಬೇಲೂರಿನಿಂದ ಮಂಗಳೂರಿನ ಕೇಂದ್ರ ಮಾರುಕಟ್ಟೆಗೆ ಯಾವುದೇ ಪರವಾನಿಗೆ ಹಾಗೂ ದಾಖಲಾತಿ ಇಲ್ಲದೆ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಆರೋಪಿಗಳ ಪೈಕಿ ಚಾಲಕ ಅಬ್ದುಲ್ ಜಬ್ಬಾರ್ 3 ತಿಂಗಳ ಹಿಂದೆ ಚಾರ್ಮಾಡಿ ಬಳಿ ಇದೇ ರೀತಿಯ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದ.ಕ.ಜಿಲ್ಲಾ ಎಸ್.ಪಿ. ರವಿಕಾಂತೇಗೌಡ ರವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಲಾಗಿದೆ.