ಬೆಳ್ತಂಗಡಿ, ಅ 9: ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಸಮೀಪ ಭಾರೀ ಭೂ ಕುಸಿತ ಉಂಟಾಗಿದೆ. ಬೆಟ್ಟ ಜರಿದು, ನೀರು ಉಕ್ಕಿ ಹರಿದ ಪರಿಣಾಮ ಹೊಸ ತೊರೆಯೇ ಸೃಷ್ಟಿಯಾಗಿದೆ. ನೂರಾರು ರಬ್ಬರ್ ಮರಗಳು ಕೊಚ್ಚಿ ಹೋಗಿವೆ.
ಎರಡು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಸ್ಥಳೀಯ ನಿವಾಸಿ ರೆನ್ನಿ ಎಂಬವರ ಮನೆ ಕೊಚ್ಚಿ ಹೋಗಿದ್ದು, ಮನೆಯವರು ನೀರಿನ ಅಬ್ಬರದ ಸದ್ದಿಗೆ ಹೊರಗೋಡಿ ಅಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿಯೇ ಮಲಗಿದ್ದ ಎಪ್ಪತ್ತು ವರ್ಷ ಪ್ರಾಯದ ಏಲಿಯಾಮ್ಮ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಇನ್ನು ಇವರ ತೋಟದ ಹತ್ತಾರು ರಬ್ಬರ್ ಗಿಡಗಳನ್ನು ನೀರು ಕೊಚ್ಚಿಕೊಂಡು ಹೋಗಿದೆ. ಅಲ್ಲದೆ ಪಕ್ಕದ ತೋಟದಲ್ಲಿದ್ದ ನೂರಾರು ಅಡಿಕೆ ಮರಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿದ್ದಾರೆ. ಹಾಗೂ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.