ಕಾಸರಗೋಡು, ಅ 9:ಮಂಗಲ್ಪಾಡಿ ಸರಕಾರೀ ಶಾಲೆಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಗಣಿತ ಪಾಠಕ್ಕೆ ಮಲಯಾಳ ಶಿಕ್ಷಕನ ನೇಮಕದ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರ ಹೋರಾಟಕ್ಕೆ ಭಾಗಶ: ಯಶಸ್ವಿ ಲಭಿಸಿದೆ. ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಒತ್ತಡಕ್ಕೆ ಮಣಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಶಿಕ್ಷಣ ಇಲಾಖಾ ಉಪನಿರ್ದೇಶಕರನ್ನು ವಿದ್ಯಾರ್ಥಿಗಳು ದಿಗ್ಬಂಧನದಲ್ಲಿರಿಸಿದ್ದು, ವಿದ್ಯಾರ್ಥಿಗಳ ಹಾಗೂ ಹೋರಾಟಗಾರರ, ಪೋಷಕರ ಪ್ರಶ್ನೆಗೆ ತಬ್ಬಿಬ್ಬಾದ ಉಪನಿರ್ದೇಶಕರು ಮಲಯಾಳ ಶಿಕ್ಷಕನನ್ನು ಕರೆದು ಚರ್ಚಿಸಿದ್ದು , ಸೋಮವಾರ ತನಕ ಸಮಯಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಇದರಿಂದ ಹೋರಾಟ ತಾತ್ಕಾಲಿಕವಾಗಿ ಕೊನೆಗೊಳಿಸಲಾಗಿದೆ. ಆಗಸ್ಟ್ ೧೩ರ ಸೋಮವಾರ ಸಂಜೆಯೊಳಗೆ ಕನ್ನಡ ಶಿಕ್ಷಕನನ್ನು ನೇಮಿಸದಿದ್ದಲ್ಲಿ ಮಂಗಳವಾರದಿಂದ ಉಗ್ರ ಹೋರಾಟ ನಡೆಸಲು ವಿದ್ಯಾರ್ಥಿಗಳು ಮತ್ತು ಪೋಷಕರು ತೀರ್ಮಾನಿಸಿದ್ದಾರೆ. ಕಳೆದ ಹತ್ತು ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲಾ ಶಿಕ್ಷಣ ಇಲಾಖಾ ಉಪನಿರ್ದೇಶಕ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದನ್ನು ಪ್ರತಿಭಟಿಸಿ ಇಂದು ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲಾ ಪರಿಸರದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಜಾಕ್, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಫರೀದಾ ಝಕೀರ್, ಹರ್ಷಾದ್ ವರ್ಕಾಡಿ ಮೊದಲಾದ ರಾಜಕೀಯ ಮುಖಂಡರು ಬೆಂಬಲ ನೀಡಿದರು.