ಬಂಟ್ವಾಳ, ಅ 9: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮಳೇ ಇಲ್ಲದಿದ್ದರೂ ಕೂಡ ನೇತ್ರಾವತಿ ನದಿಯಲ್ಲಿನ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ತೀರ ಪ್ರದೇಶಗಳು ಜಲಾವೃತಗೊಂಡಿವೆ. ಕೊಡಗು, ಸುಳ್ಯ, ಸುಬ್ರಹ್ಮಣ್ಯ, ಬಿಸಿಲೇಘಾಟ್ ನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಪರಿಣಾಮ ಜಿಲ್ಲೆಯ ಜೀವನದಿ ನೇತ್ರಾವತಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಬಾರದಿದ್ದರೂ ಬುಧವಾರ ರಾತ್ರಿ ನೇತ್ರಾವತಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, ನೇತ್ರಾವತಿ ನದಿಯೂ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ನೇತ್ರಾವತಿ ನದಿ ತಟದಲ್ಲಿರುವ ಪಾಣೆಮಂಗಳೂರು, ಆಲಡ್ಕ ಇನ್ನಿತರ ಪ್ರದೇಶಗಳ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿನ ಮುಖ್ಯ ರಸ್ತೆಯಲ್ಲಿಯೂ ನೀರು ನಿಂತಿದ್ದು ಕೃತಕ ನೆರೆ ಉಂಟಾಗಿದೆ. ಬಂಟ್ವಾಳ ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆಯಲ್ಲಿ ತೊಡಗಿದೆ. ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ಥಳೀಯ ಸಹಕಾರದಿಂದ ಮನೆಯಲ್ಲಿರುವ ಸಾಮಾಗ್ರಿಗಳನ್ನು ತೆರವು ಮಾಡಲಾಗುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ನೇತ್ರಾವತಿ ನದಿ ನೀರಿನ ಮಟ್ಟ ೭.೬ ಮೀಟರ್ ತಲುಪಿದೆ ಎಂದು ತಿಳಿದು ಬಂದಿದ್ದು, ತುಂಬೆ ಡ್ಯಾಂನ ಎಲ್ಲ ಬಾಗಿಲನ್ನು ತೆರೆಯಲಾಗಿದೆ.