Karavali
ಕುಂದಾಪುರ: ಸಾರ್ವಜನಿಕರು ಹಕ್ಕು ಮಾತ್ರವಲ್ಲ ಕರ್ತವ್ಯವನ್ನು ತಿಳಿದುಕೊಳ್ಳಬೇಕು-ಡಿವೈಎಸ್ಪಿ
- Thu, Aug 09 2018 04:51:23 PM
-
ಕುಂದಾಪುರ, ಆ 09: ಸುಗಮ ಸಂಚಾರ ವ್ಯವಸ್ಥೆಯಲ್ಲಿ ಸಾರ್ವಜನಿಕರು ತಮ್ಮ ಹಕ್ಕುಗಳ ಜೊತೆ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರ ಜೊತೆ ಸಾರ್ವಜನಿಕರು ಕೈ ಜೋಡಿಸಬೇಕು. ಸಾರ್ವಜನಿಕ ಸಹಕಾರವಿದ್ದರೆ ಸಂಚಾರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂದು ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ದಿನೇಶ ಕುಮಾರ್ ಹೇಳಿದರು.
ಕುಂದಾಪುರ ತಾ.ಪಂ.ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್, ಕುಂದಾಪುರ ಸಂಚಾರ ಪೊಲೀಸ್ ಠಾಣೆ ವತಿಯಿಂದ ಕುಂದಾಪುರ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕುಂದಾಪುರದಲ್ಲಿ ವಾಹನ ನಿಲುಗಡೆಗೆ ಸೂಕ್ತ ಸ್ಥಳವಕಾಶದ ಕೊರತೆ ಇದೆ. ಕೆಲವೊಂದು ಕಡೆಗಳಲ್ಲಿ ಅವ್ಯವಸ್ಥಿತವಾಗಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಅಂಗಡಿ ಮುಂಗಟ್ಟುಗಳ ಮುಂದೆ ಯದ್ವತದ್ವಾ ವಾಹನ ನಿಲ್ಲಿಸಲಾಗುತ್ತದೆ. ಜನರು ಸುಗಮ ಸಂಚಾರಕ್ಕೆ ತಾವು ಅನುಸರಿಸಬಹುದಾದ ಜವಾಬ್ದಾರಿಯನ್ನು ಪ್ರತಿಯೊಬ್ಬರು ಪಾಲಿಸಿದರೆ ಅರ್ಧದಷ್ಟು ಸಮಸ್ಯೆ ಪರಿಹಾರವಾಗುತ್ತದೆ ಎಂದರು.
ಸಹಾಯಕ ಆಯುಕ್ತರಾದ ಟಿ.ಬೂಬಾಲನ್ ಅವರು ಕುಂದಾಪುರದಲ್ಲಿ ಸುಗಮ ಸಂಚಾರದ ಕುರಿತಂತೆ ಸಲಹೆ ಸೂಚನೆಗಳನ್ನು ನೀಡಿದರು. ಕುಂದಾಪುರದಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯ ಮಂದಗತಿಯ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ಕೂಡಲೇ ಕಾಮಗಾರಿ ಮುಗಿಸುವಂತೆ ಸೂಚಿಸಿದರು. ಭವಿಷ್ಯದ ಅಭಿವೃದ್ದಿಯ ದೃಷ್ಟಿಯಲ್ಲಿ ಈಗಲೇ ಕೆಲವೊಂದು ತೀರ್ಮಾನಗಳನ್ನು ತಗೆದುಕೊಳ್ಳಬೇಕು. ಇದಕ್ಕೆ ಸಾರ್ವಜನಿಕರ ಸಲಹೆ ಸೂಚನೆಗಳು ಬೇಕು. ಭವಿಷ್ಯದ ದೃಷ್ಟಿಯಲ್ಲಿ ಪ್ರತಿಯೊಬ್ಬರು ಯೋಚಿಸಬೇಕು ಎಂದರು.ನ್ಯೂ ಮೆಡಿಕಲ್ನ ದಿನಕರ ಶೆಟ್ಟಿ ಮಾತನಾಡಿ ಕುಂದಾಪುರದ ನಗರದ ಒಳಗೆ ಸಂಚಾರ ದಟ್ಟಣಿ ಕಡಿಮೆ ಮಾಡಲು ಸಾರ್ವಜನಿಕರ ಸಹಕಾರವೂ ಬೇಕು. ಎಲ್ಲಾ ವ್ಯವಹಾರ ಕೇಂದ್ರಗಳು ನಗರದ ಒಳಗೆ ಇರುವುದರಿಂದ ಸಹಜವಾಗಿ ಟ್ರಾಫಿಕ್ ಜಾಮ್ ಆಗುತ್ತದೆ. ಅದನ್ನು ತಡೆಯಲು ಹೆದ್ದಾರಿ ಸಂಪರ್ಕ ರಸ್ತೆಯ ಪಾರ್ಶ್ಚಗಳಲ್ಲಿ ಸ್ಥಳ ಇರುವಲ್ಲಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದರು.
ರಿಕ್ಷಾ ಚಾಲಕ ಅಣ್ಣಯ್ಯ ಮಾತನಾಡಿ, ಕಟ್ಟಡಗಳನ್ನು ಕಟ್ಟುವಾಗ ಪಾರ್ಕಿಂಗ್ಗೆ ಸ್ಥಳ ಬಿಡುವುದಿಲ್ಲ. ಹಾಗಾಗಿ ಬೇಕಬಿಟ್ಟಿ ವಾಹನಗಳು ನಿಂತಿರುತ್ತವೆ. ಆಗ ಪೊಲೀಸರು ಬಡಪಾಯಿ ವಾಹನಗಳ ಮೇಲೆ ಕೇಸ್ ಹಾಕುತ್ತಾರೆ. ಅಂಗಡಿಯವರ ಮೇಲೆ ಏಕೆ ಕೇಸ್ ಹಾಕುವುದಿಲ್ಲ. ಅಂಗಡಿಗಳ ಮಾಲಿಕರು ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕು ಎಂದರು.ಸುಧಾಕರ ಶೆಟ್ಟಿ ಮಾತನಾಡಿ ಹೆದ್ದಾರಿ ಡಿವೈಡರ್ ನಡುವಿನ ತೋಡಿನಿಂದ ದ್ವಿಚಕ್ರ ವಾಹನ ನುಗ್ಗಿಸುವುದರಿಂದ ಅಪಘಾತ ಸಂಭವಿಸುತ್ತದೆ. ಹಾಗೆಯೇ ಸರ್ಕಾರಿ ಬಸ್ಗಳಿಗೆ ಪ್ರತ್ಯೇಕ ಬಸ್ ನಿಲ್ದಾಣ ಇದ್ದರೂ ಕೂಡಾ ಖಾಸಗಿ ಬಸ್ ನಿಲ್ದಾಣಕ್ಕೆ ಬರುತ್ತದೆ ಈ ಬಗ್ಗೆ ಗಮನ ಹರಿಸಬೇಕು ಎಂದರು.ಕುಂದಾಪುರ ನಗರದ ಒಳಗೆ 15-20 ಬ್ಯಾಂಕಗಳಿದ್ದು, ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ವಾಹನಗಳಿಂದಲೇ ನಿಲುಗಡೆ ಪ್ರದೇಶ ಭರ್ತಿಯಾಗಿರುತ್ತದೆ. ಬ್ಯಾಂಕ್ ಗಳ ಪರಿಸರದಲ್ಲಿ ವಾಹನ ನಿಲುಗಡೆಗೆ ನೀತಿ ರೂಪಿಸಬೇಕು, ಬೋರ್ಡ್ ಹೈಸ್ಕೂಲ್ ಎದುರುಗಡೆ ಬಸ್ಗಳು ನಿಲ್ಲುತ್ತಿದ್ದು, ಅನವಶ್ಯಕವಾಗಿ ಬಸ್ ನಿಲ್ಲಿಸದಂತೆ ಸೂಚಿಸಬೇಕು ಎನ್ನುವ ಸಲಹೆಗಳು ಕೇಳಿ ಬಂದವು.
ಶಂಕರ್ ಅಂಕದಕಟ್ಟೆ ಮಾತನಾಡಿ, ನಗರದ ಹಲವಾರು ರಿಕ್ಷಾ ನಿಲ್ದಾಣಗಳಿದ್ದು, ಎಲ್ಲಿಯೂ ವ್ಯವಸ್ಥಿತ ನಿಲ್ದಾಣಗಳಿಲ್ಲ. ಅಟೋ ನಿಲ್ದಾಣವನ್ನು ನಿರ್ಮಿಸಿಕೊಟ್ಟು ಎಲ್ಲಿ ಅಟೋ ನಿಲ್ಲಿಸಬೇಕು ಎನ್ನುವ ಮಾಹಿತಿ ನೀಡುವ ಕೆಲಸ ಆಗಬೇಕು ಎಂದರು. ಅರುಣ್ ಕುಮಾರ್ ಶೆಟ್ಟಿ ಮಾತನಾಡಿ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ವೇಗದ ಮಿತಿ ಅಳವಡಿಸಬೇಕು ಎಂದರು.ಪುರಸಭೆ ಮುಖ್ಯಾಧಿಕರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಖಾಸಗಿ ಬಸ್ಗಳು ಜಾಸ್ತಿ ಹೊತ್ತು ನಿಲುಗಡೆ ಮಾಡಲು ಫೇರಿ ರಸ್ತೆಯ ಹಿಂಭಾಗ ಸ್ಥಳವಕಾಶವಿದ್ದು ಸಹಾಯಕ ಆಯುಕ್ತರು ಅನುಮತಿ ನೀಡಿದರೆ ಅಲ್ಲಿ ನಿಲುಗಡೆಗೆ ಸಾಧ್ಯವಿದೆ. ರಿಕ್ಷಾಗಳಿಗೆ ನಗರ, ಗ್ರಾಮೀಣ ಎಂದು ಸ್ಟೀಕರ್ ಅಳವಡಿಸಿ ಮಾಹಿತಿ ನೀಡುವ ಕಾರ್ಯ ಆರ್.ಟಿ.ಓ ಅಧಿಕಾರಿಗಳು ಮಾಡಬೇಕು. ಬೆಂಗಳೂರು, ಮುಂಬಯಿ ಬಸ್ಗಳು ನಗರದ ಒಳಗೆ ಬರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ. ನಗರದ ಒಳಗಡೆ ಬರಲು ಈ ಬಸ್ಗಳಿಗೆ ಅವಕಾಶ ಇಲ್ಲ, ಪರವಾನಿಗೆಯಲ್ಲಿಯೂ ಕೂಡಾ ಇದರ ಉಲ್ಲೇಖ ಇರುವುದಿಲ್ಲ ಎಂದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೆಕರ್ ಉಪಸ್ಥಿತರಿದ್ದರು. ವೃತ್ತ ನಿರೀಕ್ಷಕ ಮಂಜಪ್ಪ ಸ್ವಾಗತಿಸಿದರು.
ವಾಕಿಂಗ್ಗೆ ಬರುವಾಗ ನಡೆದುಕೊಂಡೆ ಬನ್ನಿ
ಕುಂದಾಪುರ ಗಾಂಧಿ ಮೈದಾನದ ಹತ್ತಿರ ಟ್ರಾಫಿಕ್ ಸಮಸ್ಯೆ ಆಗುತ್ತದೆ. ಇದಕ್ಕೆ ಕಾರಣ ಗಾಂಧಿ ಮೈದಾನದಲ್ಲಿ ವಾಕಿಂಗ್ಗೆ ಬರುವವರು. ಗಾಂಧಿ ಮೈದಾನದ ತನಕ ವಾಹನಗಳಲ್ಲಿ ಬಂದು, ನಂತರ ವಾಕಿಂಗ್ ಮಾಡುವುದಕ್ಕಿಂತ ಮನೆಯಿಂದಲೇ ನಡೆದುಕೊಂಡೇ ಬಂದರೆ ಟ್ರಾಫಿಕ್ ಸಮಸ್ಯೆಯೂ ಉಂಟಾಗುವುದಿಲ್ಲ. ಇಂದನವೂ ಉಳಿತಾಯವಾಗುತ್ತದೆ. ಒಳ್ಳೆಯ ವಾಕಿಂಗ್ ಕೂಡಾ ಆಗುತ್ತದೆ ಎನ್ನುವ ಸಲಹೆ ನಾಗರಿಕರೊಬ್ಬರು ನೀಡಿದರು.ರಸ್ತೆ ಸರಿಮಾಡದಿದ್ದರೆ ಟೋಲ್ ನಿಲ್ಲಿಸಿ
ನವಯುಗದ ಕಾಮಗಾರಿ ನಡೆಯುತ್ತಿರುವುದರಿಂದಲೇ ನಗರದ ಹೃದಯ ಭಾಗದಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ.೭ ವರ್ಷಗಳಿಂದ ಕುಂದಾಪುರದಲ್ಲಿ ಮೇಲ್ಸೆತುವೆ ಕಾಮಗಾರಿ ನಡೆಯುತ್ತಲೇ ಇದೆ. ಇನ್ನೊಂದೆಡೆ ಹೆದ್ದಾರಿ ತೀರಾ ಹದಗೆಟ್ಟು ಹೋಗಿದೆ. ಘನ ವಾಹನಗಳು ಸರ್ವೀಸ್ ರಸ್ತೆಯಲ್ಲಿಯೇ ಹೋಗುತ್ತಿದೆ. ಹೆದ್ದಾರಿ ಕಾಮಗಾರಿಯೇ ಅಪೂರ್ಣವಾಗಿದೆ. ಸಂಚಾರಕ್ಕೆ ಕಷ್ಟವಾಗುತ್ತಿದೆ. ಬೇಗ ಸರಿಪಡಿಸಿ ಇಲ್ಲ ಟೋಲ್ ನಿಲ್ಲಿಸಿ ಎಂದು ಸಾರ್ವಜನಿಕರು ನವಯುಗ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ನವಯುಗದ ಅಧಿಕಾರಿಯೋರ್ವರು ಮೊದಲು ಇಂಗ್ಲಿಷ್ನಲ್ಲಿ ಉತ್ತರ ಕೊಡುತ್ತಿದ್ದಂತೆ ಕೆರಳಿದ ಜನರು ಕನ್ನಡದಲ್ಲಿ ಉತ್ತರಿಸಿ ಎಂದು ತರಾಟೆಗೆ ತಗೆದುಕೊಂಡರು. ಹೆದ್ದಾರಿ ಕಾಮಗಾರಿಯ ಲೋಪದಿಂದ ಡ್ರೈನೇಜ್ ಸಮಸ್ಯೆ ತಲೆದೂರಿದೆ. ಚರಂಡಿಗಳ ಸಂಪರ್ಕ ಕಡಿತವಾಗಿದೆ. ಜನರಿಗೆ ತೊಂದರೆಯಾಗುತ್ತಿದೆ ಇದೆಲ್ಲ ನಿಮಗೆ ಕಾಣಿಸುತ್ತಿಲ್ಲ ಎಂದು ಆರೋಪಿಸಿದರು. ಆಗ ಎಸಿ ಅವರು ಕೂಡಾ ಅಧಿಕಾರಿಗಳಿಗೆ ಬೇಗ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದರು.ಸೋಮವಾರ ಎಲ್ಲಾ ಬಸ್ಗಳ ಪರವಾನಿಗೆ ಪರೀಕ್ಷೆ
ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ಮತ್ತು ಸರ್ಕಾರಿ ಬಸ್ಗಳ ನಡುವೆ ಚಕಚಕಿ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಬಸ್ಗಳ ಪರ್ಮಿಟ್ ಮತ್ತು ಟೈಮಿಂಗ್ನ್ನು ಸೋಮವಾರ ಆರ್.ಟಿ.ಓ ಅಧಿಕಾರಿಗಳ ಸಮಕ್ಷಮದಲ್ಲಿ ನಡೆಸಲಾಗುವುದು. ಪರ್ಮಿಟ್ ಇಲ್ಲದಿರುವುದು, ಇಲಾಖೆ ನೀಡಿದ ಸಮಯ ಮೀರಿ ಸಂಚರಿಸುವ ಬಸ್ಗಳನ್ನು ಅಮಾನತು ಮಾಡಲಾಗುವುದು ಎಂದು ಡಿವೈಎಸ್ಪಿ ತಿಳಿಸಿದರು.