ಮಂಗಳೂರು, ಆ 09: ಕಾಂಗ್ರೆಸ್ ನ ಇಬ್ಬರು ಯುವ ನಾಯಕರು ಹೊಡೆದಾಡಿಕೊಂಡ ಘಟನೆ, ನಗರದಲ್ಲಿ ಆಯೋಜಿಸಲಾದ ಕಾಂಗ್ರೆಸ್ ನ ಕ್ವಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಆ. 9 ರ ಗುರುವಾರ ನಡೆದಿದೆ. ಕ್ವಿಟ್ ಇಂಡಿಯಾ ಚಳುವಳಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿಸಿ ಹೊರಬಂದ ಜಿಲ್ಲೆಯ ಘಟಾನುಘಟಿ ಕಾಂಗ್ರೆಸ್ ನಾಯಕ ಮುಂದೆಯೇ ಯೂತ್ ಕಾಂಗ್ರೆಸ್ ನಾಯಕ ಮಿಥುನ್ ರೈ ಮತ್ತು ಪುನೀತ್ ಶೆಟ್ಟಿ ಕೈ ಕೈ ಮಿಲಾಯಿಸಿದ್ದು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ತೀವ್ರ ಮುಜುಗರ ಸೃಷ್ಟಿಸಿದೆ.
ಇಬ್ಬರ ಯುವ ನಾಯಕ ಮಧ್ಯೆ ರಾಜಕೀಯ ವೈಮನಸ್ಸು ಇದ್ದ ಹಿನ್ನಲೆಯಲ್ಲಿ ಎರಡು ತಂಡದ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದು ಹೊಡೆದಾಡಿಕೊಂಡದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಲುಪುವ ಮುಂಚೆ ಮದ್ಯ ಪ್ರವೇಶಿಸಿ ಕಾಂಗ್ರೆಸ್ ಮುಖಂಡರು ಇತ್ತಂಡಗಳನ್ನು ಸಮಾಧಾನಗೊಳಿಸಿ ಪುರಭವನದಿಂದ ತೆರಳುವಂತೆ ಸೂಚಿಸಿದ್ದಾರೆ.ಈ ಘಟನೆಯಿಂದ ಅಲ್ಲಿದ್ದ ಕಾಂಗ್ರೆಸ್ ನ ಹಿರಿಯ ನಾಯಕರಾದ ಮಾಜಿ ಸಚಿವ ಜೆ.ಆರ್ ಲೋಬೋ, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ನಗರ ಪಾಲಿಕೆ ಸದಸ್ಯ ನವೀನ್ ಡಿ ಸೋಜಾ ಮುಂತಾದ ಮುಖಂಡರುಗಳಿಗೆ ಮುಜುಗರ ಉಂಟುಮಾಡಿದೆ.
ಘಟನೆ ಬಳಿಕ ಮಾತನಾಡಿದ ಯುವ ನಾಯಕ ಪುನೀತ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಬೆಂಬಲಿಗರಿಂದ ನನ್ನ ಮೇಲೆ ಹಲ್ಲೆ ನಡೆದಿದೆ. ನಾನು ಇಂಟಕ್ ಅಧ್ಯಕ್ಷನಾಗಿದ್ದು, ಸಮಾಜಸೇವೆ ಮಾಡುತ್ತಿದ್ದೇನೆ. ಮಿಥುನ್ ರೈ 10 ದಿನಗಳ ಹಿಂದೆ ನನ್ನ ಮೇಲೆ ನಕಲಿ ದೂರು ನೀಡಿದ್ದಾನೆ. ಅವಿನಾಶ್, ಗಿರೀಶ್ ಆಳ್ವ ಮೊದಲಾದವರು ಗೂಂಡಾಗಳಂತೆ ವರ್ತಿಸಿ ನನಗೆ ಹಲ್ಲೆ ನಡೆಸಿದ್ದಾರೆ. ಯುವ ಸಮಾಜವೂ, ಮಿಥುನ್ ರೈ ಅವರ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿಲ್ಲ. ಈಗಾಗಲೇ ಅವರ ವಿರುದ್ದ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳಿದ್ದು, ಒಬ್ಬ ಸಮರ್ಥ ನಾಯಕನಿಗೆ ಇರಬೇಕಾದ ಗುಣಗಳು ಮಿಥುನ್ ರೈ ಹೊಂದಿಲ್ಲ. ಇಂತಹ ಅಸಮರ್ಥರ ಕೈಗೆ ಯುವ ಕಾಂಗ್ರೆಸ್ ನ ಜವಬ್ದಾರಿಯನ್ನು ನೀಡಿರುವುದರ ಬಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕರು ಮತ್ತೊಮ್ಮೆ ಯೋಚಿಸಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.