ಬಂಟ್ವಾಳ, ಆ 9: ಪರಿಚಿತರಂತೆ ಮನೆಯ ಬಾಗಿಲು ಬಡಿದು, ಬಾಗಿಲು ತೆರೆದಾಗ ಮನೆ ಮಾಲೀಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ದುಷ್ಕರ್ಮಿಗಳು ಚಿನ್ನಾಭರಣ ದೋಚಿದ ಘಟನೆ ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿ ಆಗಸ್ಟ್ 8 ರ ಬುಧವಾರ ರಾತ್ರಿ ನಡೆದಿದೆ.
ಮೊಡಂಕಾಪು ಕಾಲೇಜಿನ ಬಳಿಯ ನಿವಾಸಿಯಾಗಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ಜನಾರ್ದನ ಹೊಳ್ಳ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದು, ಬುಧವಾರದಂದು ರಾತ್ರಿ ಸುಮಾರು 9 ಗಂಟೆಗೆ ಮನೆಯ ಕಾಲಿಂಗ್ ಬೆಲ್ ಸದ್ದಾಗಿದೆ. ಪುತ್ರನ ಮನೆಗೆ ಬರುವ ನಿರೀಕ್ಷೆಯಲ್ಲಿದ್ದರಿಂದ ಆತನೇ ಬಂದಿರಬಹುದೆಂದು ಜನಾರ್ದನ ಹೊಳ್ಳ ಬಾಗಿಲು ತೆರೆದಿದ್ದಾರೆ. ತಕ್ಷಣ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಜನಾರ್ದನ ಹೊಳ್ಳ ಅವರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು, ಅವರ ಕುತ್ತಿಗೆಯಲ್ಲಿದ್ದ ಸುಮಾರು ಮೂರು ಪವನ್ ಅಂದಾಜಿನ ಚಿನ್ನದ ಸರ ಕಿತ್ತು ಪರಾರಿಯಾಗಿದ್ದು, ಗಾಯಗೊಂಡ ಹೊಳ್ಳರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಎಸ್.ಐ. ಚಂದ್ರಶೇಖರ್, ಅಪರಾಧ ವಿಭಾಗ ಎಸ್.ಐ. ಹರೀಶ್, ಗ್ರಾಮಾಂತರ ಠಾಣೆ ಎಸ್.ಐ. ಪ್ರಸನ್ನ ಭೇಟಿ ನೀಡಿ ಮಹಜರು ನಡೆಸಿದ್ದಾರೆ.