ಬೆಳ್ತಂಗಡಿ, ಆ 09: ಕಳೆದ ಕೆಲವು ದಿನಗಳಿಂದ ಕ್ಷೀಣಿಸಿದ್ದ ಮುಂಗಾರು ಕರಾವಳಿಯಲ್ಲಿ ಮತ್ತೆ ಚುರುಕುಗೊಂಡಿದ್ದು, ಪರಿಣಾಮ ವರುಣನ ಆರ್ಭಟ ಜೋರಾಗಿದೆ. ಆಗಸ್ಟ್ 8 ರ ಬುಧವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಉದನೆ, ಶಿರಾಡಿ, ನೇಲಡ್ಕ, ಶಿಶಿಲ ಪ್ರದೇಶದಲ್ಲಿ ರಸ್ತೆ ಹಾಗೂ ಮನೆಗಳು ಜಲಾವೃತ್ತವಾಗಿದೆ. ಪರಿಣಾಮ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಭಾರೀ ಮಳೆಯ ಪರಿಣಾಮ ಶಿರಾಡಿ ಪ್ರದೇಶದ ಹೊಳೆಗಳು ಉಕ್ಕಿ ಹರಿಯುತ್ತಿದೆ. ಹಲವೆಡೆ ಮನೆಗಳು ಜಲಾವೃತ್ತಗೊಂಡಿದೆ. ಗುಂಡ್ಯ ಹೊಳೆಯು ಉಕ್ಕಿ ಹರಿಯುತ್ತಿದ್ದು ಉದನೆ, ನೇಲಡ್ಕ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಜಲವೃತವಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಶಿಶಿಲದಲ್ಲಿರುವ ಪ್ರಸಿದ್ದ ಶಿಶಿಲೇಶ್ವರ ದೇವಸ್ಥಾನ ಮುಳುಗಡೆಯಾಗುವ ಭೀತಿಯಲ್ಲಿದ್ದು, ದೇವಸ್ಥಾನದ ಮದ್ಯಭಾಗದಲ್ಲಿ ಪ್ರವಾಹ ಹಾದು ಹೋಗುತ್ತಿದೆ. ಶಿಶಿಲ ತೂಗು ಸೇತುವೆ ಜಲಾವೃತವಾಗಿದ್ದು ಜನರು ಪರದಾಡುವಂತಾಗಿದೆ. ಈಗಾಗಲೇ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಕೊಡಗು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ಗುರುವಾರ ರಜೆ ಘೋಷಿಸಿದೆ.ನೇತ್ರಾವತಿ ಹಾಗೂ ಕುಮಾರಧಾರ ನದಿಗಳು ಅಪಾಯದ ಪರಿಷ್ಕೃತ ಮಟ್ಟ 30.5 ಮೀ ಸನಿಹದಲ್ಲಿ ಹರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿದೆ.