ಸುರತ್ಕಲ್ ಆ 09: ಹಣಕ್ಕಾಗಿ ಇಳಿವಯಸ್ಸಿನ ತಂದೆಯನ್ನು ಪೀಡಿಸುತ್ತಿದ ಮಗ ಪೊಲೀಸರ ಮಧ್ಯಪ್ರವೇಶದಿಂದ ಇದೀಗ ತಂದೆಯೊಂದಿಗೆ ಕ್ಷಮೆಯಾಚನೆ ಮಾಡಿದ್ದಾನೆ. ಹೊಸಬೆಟ್ಟು ಶ್ರೀ ರಾಘವೇಂದ್ರ ಮಠದಲ್ಲಿ 88 ವರ್ಷದ ಯೋಗೀಶ ಭಟ್ಟ ಎಂಬವರು ಮಠಕ್ಕೆ ಬಂದಂತಹ ಭಕ್ತರಿಗೆ ತೀರ್ಥ ಪ್ರಸಾದ ಕೊಡುವ ಸೇವೆಯನ್ನು ತನ್ನ ಪಾಡಿಗೆ ತಾನು ಮಾಡಿಕೊಂಡಿದ್ದರು. ಆದರೆ ಇವರ 38 ವರ್ಷದ ಮಗನಾದ ಸುರೇಶ ಭಟ್ಟ ಎಂಬಾತ ಕಳೆದ 8 ವರ್ಷದಿಂದ ದುಡ್ಡಿಗಾಗಿ ತಂದೆಗೆ ಚಿತ್ರಹಿಂಸೆ ನೀಡುತ್ತಿದ್ದ. ಮಠಕ್ಕೆ ಬಂದು ವೃದ್ದ ತಂದೆಗೆ ದುಡ್ಡಿಗಾಗಿ ಹೊಡೆಯುತ್ತಿದ್ದ. ಇತ್ತೀಚೆಗೆ ಈತ ಮಠಕ್ಕೆ ಬಂದು ಅಪ್ಪನಿಗೆ ಹೊಡೆಯುವ, ಪೆಟ್ಟಿಗೆ ಎಳೆದುಕೊಂಡು ಹೋಗುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಜನರಿಂದ ಹಾಗೂ ಸ್ಥಳೀಯರಿಂದ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ವೃದ್ಧ ತಂದೆಗೆ ಹಿಂಸೆ ನೀಡುವ ಮಗನಿಗೆ ಶಿಕ್ಷೆಯಾಗಲೇಬೇಕು ಜನರು ಆಗ್ರಹಿಸುತ್ತಿದ್ದರು.
ಕೊನೆಗೂ ವಿಷಯ ಅರಿತ ಸುರತ್ಕಲ್ ಠಾಣೆಯ ಪೊಲೀಸರು, ಉಡುಪಿಯಲ್ಲಿದ್ದ ಯೋಗೀಶ ಭಟ್ಟರ ಮಗನನ್ನು ಆ. 8 ರ ಬುಧವಾರ ಠಾಣೆಗೆ ಕರೆಸಿದ ಪೊಲೀಸರು ಎಚ್ಚರಿಕೆ ನೀಡಿದರು. ಮಾಡಿದ ತಪ್ಪಿಗೆ ಅಪ್ಪನ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಆತನಿಗೆ ಹೇಳಿದರು. ಅಲ್ಲದೆ ಮುಂದೆ ಹಲ್ಲೆ, ಹಿಂಸೆ ನೀಡಿದರೆ ಕಠಿನ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಯಿತು. ಇದಕ್ಕೆ ಒಪ್ಪಿದ ಸುರೇಶ ಭಟ್ಟ ತಂದೆಯನ್ನು ಚೆನ್ನಾಗಿ ಗೌರವದಿಂದ ನೋಡಿಕೊಳ್ಳುವುದಾಗಿ ಮಾತುಕೊಟ್ಟ ಬಳಿಕ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಯಿತು. ಯೋಗೀಶ ಭಟ್ಟರು ಹಲವಾರು ವರ್ಷಗಳಿಂದ ರಾಘವೇಂದ್ರ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದು, ಭಕ್ತರ ಹಾಗೂ ಸ್ಥಳೀಯರ ಪ್ರೀತಿಗೂ ಪಾತ್ರರಾಗಿದ್ದಾರೆ.