ಕಾರ್ಕಳ, ಆ 09: ಎರಡು ಟನ್ ಗೇರು ಬೀಜ ಪಡೆದು ಹಣ ನೀಡದೇ ಮೋಸ ಮಾಡಿ ನಂಬಿಕೆ ದ್ರೋಹ ಎಸಗಿದ ನಾಲ್ವರ ವಿರುದ್ಧ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ. ಕಾಬೆಟ್ಟು ನಿವಾಸಿ ಪದ್ಮನಾಭ ಪೂಜಾರಿ ಪ್ರಕರಣದ ದೂರುದಾರರಾಗಿದ್ದು, ಕಾರ್ಕಳ ನಗರದಲ್ಲಿ ಗೇರುಬೀಜ ಮತ್ತು ಕಾಳು ಮೆಣಸು ವ್ಯವಹಾರ ನಡೆಸುತ್ತಿದ್ದಾರೆ. 2018 ಜೂನ್ 23ರಂದು ಇವರ ವ್ಯವಹಾರ ಕೇಂದ್ರಕ್ಕೆ ಪ್ರೀತಿಕಾ ಹೆಸರಿನ ಮಹಿಳೆಯ ವಾಟ್ಸ್ ಅಫ್ ಮುಖೇನ ಸಂಪರ್ಕಿಸಿ ಗೇರುಬೀಜ ಖರೀದಿ ಬಗ್ಗೆ ಕೋಟೇಶನ್ ಕೇಳಿದ್ದರು. ಅದರಂತೆ 25,77,250 ಮೊತ್ತದ ಕೊಟೇಶನ್ನನ್ನು ಇ-ಮೇಲ್ ಗೆ ಕಳುಹಿಸಲಾಗಿತ್ತು.
ಜುಲಾಯಿ 4 ರಂದು 17,11,500 ಮೊತ್ತದ ಎರಡು ಟನ್ ಗೇರು ಬೀಜವನ್ನು ಕೆ.ಎ.18-3522 ನೇ ನಂಬರ್ ನ ಟಾಟಾ 407 ವಾಹನದಲ್ಲಿ ಮೊಹಮ್ಮದ್ ರಿಜ್ವಾನ್ ಎಂಬವರ ಮುಖಾಂತರ ತಮಿಳುನಾಡು ಇರೋಡ್ ಉತ್ತುಕುಳಿ ನಂಜಾಯಿಯ ಚಿನ್ನಯಂ ಪಾಲಯಂನಲ್ಲಿರುವ ಶ್ರೀ ಕೃಷ್ಣ ಏಜೆನ್ಸಿ ಕಳುಹಿಸಿಕೊಡಲಾಗಿತ್ತು. ಆ ಸಂಸ್ಥೆಯ ಕಿಶೋರ್ ಎಂಬವರು ಗೇರುಬೀಜವನ್ನು ಸ್ವೀಕರಿಸಿದ್ದರು. ಆರ್ಟಿಜಿಎಸ್ ಮೂಲಕ ಮೊತ್ತವನ್ನು ಪಾವತಿಸುವುದಾಗಿ ಸಂಸ್ಥೆಯ ಮುಖ್ಯಸ್ಥ ಪ್ರಭು ನಾಗರಾಜ ತಿಳಿಸಿದ್ದರು. ಈ ಎಲ್ಲಾ ವ್ಯವಹಾರ ನಡೆದ ಬಳಿಕ ಶ್ರೀ ಕೃಷ್ಣ ಏಜೆನ್ಸಿಯ ಪ್ರತೀಕಾಳನ್ನು ಮೊಬೈಲ್ ಮುಖಾಂತರ ಸಂಪರ್ಕಿಸಿದಾಗ ಆಕೆಯ ಮೊಬೈಲ್ ಸ್ವಿಚ್ ಆಫ್ ಮಾಡಿದಲ್ಲದೇ ನಂಬಿಕೆ ವ್ಯವಹಾರದಲ್ಲಿ ವಂಚಿಸಿದ ದೂರಿನನ್ವಯ ಶ್ರೀ ಕೃಷ್ಣ ಏಜೆನ್ಸಿಯ ಮುಖ್ಯಸ್ಥ ಪ್ರಭು ನಾಗರಾಜ, ಕವಿತಾ, ಪ್ರೀತಿಕಾ, ಕಿಶೋರ್ ಎಂಬವರ ವಿರುದ್ಧ ಕೇಸುದಾಖಲಾಗಿದೆ.