ಉಡುಪಿ, ಅ 1: ಶ್ರೀರಾಮ ಇಡೀ ಜಗತ್ತಿಗೆ ಆದರ್ಶ ಪುರಷನಾಗಿದ್ದಾನೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ, ಅವನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸಾಧ್ಯವಾಗದಿರುವುದು ಅಪಮಾನ, ಅನ್ಯಾಯ ಹಾಗೂ ಅಧರ್ಮದ ಕಾರ್ಯವಾಗಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು. ಅವರು ಭಾನುವಾರ ನಡೆದ ಸೀತಾರಾಮಚಂದ್ರ ದೇವಸ್ಥಾನದಲ್ಲಿ ವಿಶ್ವಹಿಂದೂ ಪರಿಷತ್ -ಬಜರಂಗದಳ ಬೈಂದೂರು ಪ್ರಖಂಡದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಈ ಬಗ್ಗೆ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಉಡುಪಿಯಲ್ಲಿ ನ. ೨೪ರಿಂದ ಮೂರು ದಿನಗಳ ಕಾಲ ಧರ್ಮ ಸಂಸದ್ ಕಾರ್ಯಕ್ರಮ ಸಂಘಟಿಸಲಾಗಿದೆ, ಆ ಕಾರ್ಯಕ್ರಮದಲ್ಲಿ ದೇಶದ ಸುಮಾರು ಎರಡೂವರೆ ಸಾವಿರ ಸ್ವಾಮೀಜಿಗಳು ಭಾಗವಹಿಸಲಿದ್ದು, ಆ ಸಭೆ ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಥಮ ಹೆಜ್ಜೆಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ದಕ್ಷಿಣ ಮಧ್ಯಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ ಹೇಳಿದರು.
ಸ್ವಾತಂತ್ರ್ಯದ ಬಳಿಕ ಧರ್ಮ ಸಾಮ್ರಾಜ್ಯ ಮಾಡಲು ಸರ್ಕಾರಗಳು ಯೋಚಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು ರಾಜಕೀಯದಲ್ಲಿ ಧರ್ಮಯಿರಬೇಕು, ಧರ್ಮದಲ್ಲಿ ರಾಜಕೀಯತೆ ಇರಬಾರದು ಎಂದು ಕೌಟಿಲ್ಯನು ಪ್ರತಿಪಾದಿಸಿದ್ದಾರೆ. ಹಿಂದೂ ಧರ್ಮದ ವಿರೋದಿಗಳ ಬಗ್ಗೆ ಮಾತನಾಡಿದರೆ ದೇಶದ್ರೋಹಿಯ ಹಣೆಪಟ್ಟಿ ಕಟ್ಟುತ್ತಿದ್ದಾರೆ ಎಂದು ಟೀಕಿಸಿದ ಅವರು ಈ ದೇಶದಲ್ಲಿರುವುದು ಕೇವಲ ಹಿಂದೂ ಧರ್ಮ ಮಾತ್ರ, ಉಳಿದೆಲ್ಲವುಗಳು ಮತಗಳಾಗಿದ್ದು, ಈ ಸನಾತನ ಧರ್ಮದ ರಕ್ಷಣೆಗಾಗಿ ಯುವಪಡೆ ಸೆಟೆದು ನಿಲ್ಲಬೇಕು ಎಂದರು.
ನಮಗೆ ಮಹಾನ್ ಪುರುಷನ ಹುಟ್ಟೂರಿನಲ್ಲಿ ಒಂದು ದೇಗುಲ ನಿರ್ಮಿಸಲು ಸಾಧ್ಯವಾಗಲಿಲ್ಲ. ಇದು ನಮಗೆ ಅವಮಾನಕರ ವಿಚಾರ. ಆದರ್ಶಕ್ಕೆ ಇನ್ನೊಂದು ಹೆಸರೆಂದರೆ ಅದು ಶ್ರೀರಾಮಚಂದ್ರ. ಮಗನಾಗಿ, ಅಣ್ಣನಾಗಿ, ಪತಿಯಾಗಿ, ರಾಜನಾಗಿ ಕೊನೆಗೆ ಶತ್ರುವಾಗಿ ಕೂಡ ಆದರ್ಶ ವ್ಯಕ್ತಿ ಯಾರೆಂದು ಕೇಳಿದರೆ ಅದು ಶ್ರೀರಾಮಚಂದ್ರ ಎನ್ನುತ್ತಾರೆ. ನಮ್ಮ ದೇಶದಲ್ಲಿ ಅಂತಹ ಪುಣ್ಯ ಪುರುಷ ಹುಟ್ಟಿದ ಸ್ಥಳದಲ್ಲಿ ಒಂದು ದೇಗುಲ ಕಟ್ಟಲಾಗಲಿಲ್ಲ. ಇದು ನಮಗೆ ಮಸಿ ಬಳಿದಂತಹ ವಿಚಾರ ಎಂದರು.
ಇದೇ ವೇಳೆ ಕಲ್ಲಡ್ಕ ಶಾಲೆಯ ವಿಷಯವನ್ನು ಪ್ರಸ್ತಾಪಿಸಿ , ಕಳೆದ ೧೦ ವರ್ಷದಿಂದ ಕೊಲ್ಲೂರು ದೇವಳದ ಅನ್ನ ಪ್ರಸಾದ ರೂಪದಲ್ಲಿ ಕಲ್ಕಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗೆ ದೊರೆತಿತ್ತು, ಆದರೆ ಈಗ ಸರ್ಕಾರ ಅದನ್ನು ನಿಲ್ಲಿಸಿದೆ, ಎಲ್ಲರಿಗೂ ಅನ್ನ ಕೊಡಬೇಕಾದ ಸರ್ಕಾರ ಮಕ್ಕಳ ತುತ್ತಿಗೆ ಕಲ್ಲು ಹಾಕಿ ದುಷ್ಟತನ ಪ್ರದರ್ಶಿಸುತ್ತಿರುವುದು ನಾಚಿಕೆಗೇಡು, ಅನ್ನಕ್ಕಾಗಿ ನಿಮ್ಮ ಬಳಿ ಭಿಕ್ಷೆ ಬೇಡುವುದಿಲ್ಲ, ನಾವು ಜನರಿಂದ ಭಿಕ್ಷೆ ಬೇಡಿ, ವಿದ್ಯಾರ್ಥಿಗಳಿಗೆ ಅನ್ನ ನೀಡಿ, ಅವರಿಗೆ ಸ್ವಾಭಿಮಾನದ ಜೀವನ ಕಲಿಸುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ , ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್, ಮರವಂತೆ ಶ್ರೀರಾಮ ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಬಿ. ವೆಂಕಟರಮಣ ಖಾರ್ವಿ, ಮುಖಂಡರಾದ ಗೋಪಾಲಕೃಷ್ಣ, ನಿತ್ಯಾನಂದ ಉಪ್ಪುಂದ ಉಪಸ್ಥಿತರಿದ್ದರು.