ಕಾರ್ಕಳ, ಅ 8: ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಆರೋಪಿ ಮುಂಡ್ಕೂರು ಗ್ರಾಮದ ಇನ್ನಾ ಕ್ರಾಸ್ ಬಸ್ ನಿಲ್ದಾಣದ ಬಳಿ ನಿವಾಸಿ ಶೈಲೇಶ್ ಶೆಟ್ಟಿಯ ಇನ್ನಷ್ಟು ಕರಮತು ಅನಾವರಣಗೊಂಡಿದೆ. ರಾಷ್ಟ್ರೀಯ ಬ್ಯಾಂಕ್ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಅಡವಿಟ್ಟ ಚಿನ್ನಾಭರಣಗಳನ್ನು ವಶಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಂಡ್ಕೂರು ಪರಿಸರದ ಮನೆಗಳಲ್ಲಿ ನಡೆದಿರುವ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ಶೈಲೇಶ್ ಶೆಟ್ಟಿಯನ್ನು ಆಗಸ್ಟ್ ೫ರಂದು ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಅಂತೋನಿ ನೇತೃತ್ವದ ತಂಡ ಬಂಧಿಸಿತ್ತು. 2017ನೇ ಸಾಲಿನಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಂಡ್ಕೂರು ಗ್ರಾಮದ ನಿವಾಸಿ ಜಯ ಎನ್ ಶೆಟ್ಟಿ , ಜ್ಯೋತಿ ಎನ್ ಶೆಟ್ಟಿ ಹಾಗೂ 2018ನೇ ಸಾಲಿನಲ್ಲಿ ಮುಂಡ್ಕೂರು ಗ್ರಾಮದ ರಮೇಶ್ ಶೆಟ್ಟಿ ಎಂಬುವರ ಮನೆಯಿಂದ ಚಿನ್ನಾಭರಣಗಳ ಕಳವು ಪ್ರಕರಣದಲ್ಲಿ ಶೈಲೇಶ್ ಶೆಟ್ಟಿ ಆರೋಪಿಯಾಗಿದ್ದಾನೆ.
ಆರೋಪಿ ನೀಡಿರುವ ಸುಳಿವಿನ ಮೇರೆಗೆ ಸಚ್ಚರಿಪೇಟೆಯ ಕೆನರಾ ಬ್ಯಾಂಕ್ ಹಾಗೂ ಕಿನ್ನಿಗೋಳಿಯ ಸಹಕಾರಿ ಬ್ಯಾಂಕ್ನಲ್ಲಿ ಅಡವಿಟ್ಟಿದ್ದ ಹಾಗೂ ಮನೆಯಲ್ಲಿ ಬಚ್ಚಿಟ್ಟ 6 ಲಕ್ಷ ಮೌಲ್ಯದ ಸುಮಾರು 210 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಸ್ವಾಧೀನ ಪಡಿಸಿದ್ದಾರೆ.
ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯವು ಆರೋಪಿಯನ್ನು ಆಗಸ್ಟ್ ೬ರಂದು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಕೃತ್ಯದ ಬಗ್ಗೆ ಆರೋಪಿ ಶೈಲೇಶ್ ಶೆಟ್ಟಿ ಇನ್ನಷ್ಟು ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದ. ಅದರಂತೆ ಕಟೀಲು ಶಾಖೆಯ ವಿಜಯ ಬ್ಯಾಂಕ್ ಹಾಗೂ ಕಾರ್ಕಳದ ಮುತ್ತೊಟ್ಟು ಪಿನ್ ಕಾರ್ಫ್ ಸಂಸ್ಥೆಗಳಿಂದ 63.510 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿದ್ದಾರೆ. ಇದುವರೆಗೆ ಆರೋಪಿಯಿಂದ 7,87,000 ಮೌಲ್ಯದ 273.510 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿದ್ದಾರೆ.