ಸುಬ್ರಹ್ಮಣ್ಯ, ಅ 8: ಸಕಲೇಶಪುರ ಮತ್ತು ಹಾಸನ ಭಾಗದಲ್ಲಿ ಇಂದು ಮುಂಜಾನೆ ಸುರಿದ ಭಾರೀ ಮಳೆಗೆ ಮಂಗಳೂರು-ಬೆಂಗಳೂರು ರೈಲು ಹಳಿಯ ಮೇಲೆ ಗುಡ್ಡ ಮತ್ತು ಬೃಹತ್ ಬಂಡೆಯು ಕುಸಿದು ಬಿದ್ದಿದೆ. ನೆಟ್ಟಣ ರೈಲು ನಿಲ್ದಾಣ-ಸಕಲೇಶಪುರ ನಡುವಿನ ಎಡಕುಮೇರಿ ಸಮೀಪದ ಸಿರಿಬಾಗಿಲಿನ ಕೊಡಗರವಳ್ಳಿ ಎಂಬಲ್ಲಿ ಹಳಿಗೆ ಗುಡ್ಡ ಕುಸಿದಿದೆ. ಇದರಿಂದಾಗಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ನೆಟ್ಟಣ ರೈಲು ನಿಲ್ದಾಣದಿಂದ ಸುಮಾರು 65 ಕಿ.ಮೀ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದರಿಂದಾಗಿ ಪ್ರಯಾಣಿಕರು ಸಂಕಷ್ಠ ಎದುರಿಸುವಂತಾಯಿತು.
ಸಾಂದರ್ಭಿಕ ಚಿತ್ರ
ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣದಿಂದ ಮುಂದೆ ಬರುವ ಎಡಕುಮೇರಿ ಸಮೀಪದ ಸಿರಿಬಾಗಿಲಿನ ಕೊಡಗರಹಳ್ಳಿ ಎಂಬಲ್ಲಿ ಬೃಹತ್ ಗಾತ್ರದ ಗುಡ್ಡವು ಬೆಳಗ್ಗೆ 7.30ಕ್ಕೆ ಹಳಿಯ ಮೇಲೆ ಕುಸಿದು ಬಿದ್ದಿದೆ. ಇದರಿಂದಾಗಿ ರೈಲು ಹಳಿಯು ಅಸ್ತವ್ಯಸ್ತಗೊಂಡಿತು. ತಕ್ಷಣವೇ ಕಾರ್ಯಪ್ರವೃತ್ತವಾದ ರೈಲ್ವೇ ಇಲಾಖೆಯು ಮಣ್ಣ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿತು. ಈ ಮೂಲಕ ಹಳಿಯನ್ನು ಸಂಚಾರ ಯೋಗ್ಯಗೊಳಿಸಲಾಯಿತು.
ಮಳೆ ಅಧಿಕಗೊಂಡ ಕಾರಣ ಸುಮಾರು 10 ಗಂಟೆಯ ವೇಳೆಗೆ ಮತ್ತೆ ಕೊಡಗರವಳ್ಳಿ ಸಮೀಪ ಹಳಿಗೆ ಬೃಹತ್ ಗುಡ್ಡವು ಕುಸಿದು ಬಿದ್ದಿದೆ. ಇದರೊಂದಿಗೆ ಭಾರೀ ಪ್ರಮಾಣದ ಮಣ್ಣು ಮತ್ತು ಮರಗಳು ಕೂಡಾ ಹಳಿಯ ಮೇಲೆ ಬಿದ್ದಿವೆ. ವಿಚಾರ ತಿಳಿದ ತಕ್ಷಣ ಕಾರ್ಯಪ್ರವೃತ್ತವಾದ ರೈಲ್ವೆ ಇಲಾಖೆಯು ತಕ್ಷಣ ತೆರವು ಕಾರ್ಯ ಆರಂಭಿಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸಿದೆ. ಆದರೆ ಅಧಿಕ ಪ್ರಮಾಣದಲ್ಲಿ ಮಣ್ಣು ಕುಸಿದಿರುವ ಕಾರಣ ರೈಲುಗಳ ಸಂಚಾರವನ್ನು ತಡೆಹಿಡಿಯಲಾಯಿತು. ಈಗಾಗಲೇ ಜೂನ್ನಿಂದ ಈತನಕ ಹತ್ತಕ್ಕೂ ಅಧಿಕ ಬಾರಿ ಗುಡ್ಡ ಹಳಿಯ ಮೇಲೆ ಕುಸಿದು ಬಿದ್ದಿದೆ.