ಮಂಗಳೂರು, ಆ 08: ಪಶ್ಚಿಮ ಘಟ್ಟದ ಉಳಿವಿನ ಕುರಿತಾಗಿ ಕೇಂದ್ರ ಸರ್ಕಾರಕ್ಕೆ ಆ. 25 ರೊಳಗೆ ರಾಜ್ಯ ಸರಕಾರ ಅಭಿಪ್ರಾಯ ಮಂಡಿಸದಿದ್ದರೆ, ಡಾ|ಕಸ್ತೂರಿ ರಂಗನ್ ಸಮಿತಿಯ ವರದಿ ಯಥಾವತ್ ಅನುಷ್ಟಾನವಾಗಲಿದೆ. ಕಸ್ತೂರಿ ವರದಿ ಜಾರಿಗಾಗಿ ಕೇಂದ್ರ ಸರಕಾರ ರಾಜ್ಯಕ್ಕೇ ಅಭಿಪ್ರಾಯ ಮಂಡಿಸಲು ಹಲವಾರು ಬಾರಿ ಸೂಚನೆ ನೀಡದ್ದರೂ, ಅದನ್ನು ಸರಿಯಾಗಿ ಪಾಲಿಸದ ಈ ಹಿಂದಿನ ಸರ್ಕಾರ, ಸಂಸದರ ಜೊತೆ ವಾಗ್ವಾದ ನಡೆಸುತ್ತಲೇ ಕಾಲಹರಣ ಮಾಡಿತ್ತು.
ಒಂದು ವೇಳೆ ಕಸ್ತೂರಿ ರಂಗನ್ ವರದಿ ಅನುಷ್ಟಾನವಾದರೆ ಪಶ್ಚಿಮ ಘಟ್ಟ ತಪ್ಪಲಿನ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 20,668 ಚ.ಕಿ.ಮೀ ಪ್ರದೇಶ ಸೂಕ್ಷ್ಮವೆಂದು ಗುರುತಿಸಲಾಗುತ್ತದೆ. ಬಳಿಕ ಇಲ್ಲಿ ಯಾವುದೇ ಚಟುವಟಿಕೆ ನಡೆಸಲು ಅವಕಾಶ ಇರದು. ಇವು ರಾಜ್ಯದ ಹತ್ತು ಜಿಲ್ಲೆಗಳ 38 ತಾಲೂಕುಗಳ 1576 ಗ್ರಾಮಗಳ 20,668 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ 13 ಹಾಗೂ ಕುಂದಾಪುರದ 24 ಗ್ರಾಮಗಳು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ 17, ಪುತ್ತೂರಿನ 11, ಸುಳ್ಯದ 18 ಗ್ರಾಮಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಲ್ಲಿ ಸೇರುತ್ತವೆ.
ಕೇಂದ್ರ ಸರ್ಕಾರ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ 6 ರಾಜ್ಯಗಳ ಅಭಿಪ್ರಾಯವನ್ನು ಈ ಹಿಂದೆ 60 ದಿನಗಳೊಳಗೆ ಸಲ್ಲಿಸುವಂತೆ 2014ರ ಮಾರ್ಚ್ ನಲ್ಲಿ ಕೇಳಿತ್ತು. ಆದರೆ ಇದಕ್ಕೆ ಕರ್ನಾಟಕ ಸರ್ಕಾರ ಬಹಳ ತಡವಾಗಿ ಸ್ಪಂದಿಸಿತ್ತು.
ಆದರೆ ಹಿಂದಿನ ಅಧಿಸೂಚನೆಯಲ್ಲಿ ಕೇರಳ ರಾಜ್ಯದಲ್ಲಿ 13,108 ಚ.ಕಿ.ಮೀ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿತ್ತು. ಬಳಿಕ ಸುಮಾರು ಮೂರು ಸಾವಿರ ಚ.ಕಿ.ಮೀ ಪ್ರದೇಶವನ್ನು ಕೈಬಿಡಲಾಗಿತ್ತು. ಕೇರಳ ರಾಜ್ಯ ಜನವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಹೊರಗಿಟ್ಟು ಸೂಕ್ಷ್ಮ ಪ್ರದೇಶವನ್ನು ಗುರುತಿಸಿದ್ದು ಅದಕ್ಕೆ ಅಂಗೀಕಾರವೂ ದೊರೆತಿತ್ತು. ಇದು ಅಲ್ಲಿನ ಹೋರಾಟದ ಫಲ.
ಕಸ್ತೂರಿ ರಂಗನ್ ವರದಿಗಾಗಿ 2013 ರಲ್ಲಿ ಕೇಂದ್ರ ಸರಕಾರ ಮೊದಲ ಅಧಿಸೂಚನೆ ಹೊರಡಿಸಿದಾಗ ಕರಾವಳಿ, ಮಲೆನಾಡಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಪ್ರತಿಭಟನೆಗಳೂ ನಡೆದಿತ್ತು. ಈಗಲಾದರೂ ಜನರ ಆತಂಕ ನಿವಾರಿಸಲು ರಾಜ್ಯ ಸರ್ಕಾರ ವರದಿ ನೀಡುತ್ತದೆಯೇ ಎಂದು ಕಾದುನೋಡಬೇಕಿದೆ.