ಆ, 08: ಮರೀನಾ ಬೀಚ್ ನಲ್ಲಿ ಡಿಎಂಕೆ ಸರ್ವೋಚ್ಚ ನಾಯಕ ಎಂ.ಕರುಣಾನಿಧಿಯವರ ಅಂತ್ಯಸಂಸ್ಕಾರಕ್ಕೆ ತಮಿಳುನಾಡು ಹೈಕೋರ್ಟ್ ಅನುಮತಿ ನೀಡಿದ್ದು ಅವಕಾಶ ನೀಡಲು ನಿರಾಕರಿಸಿದ್ದ ತಮಿಳುನಾಡು ಎಐಎಡಿಎಂಕೆ ಸರ್ಕಾರಕ್ಕೆ ಮುಖಭಂಗವಾಗಿದೆ. ಮರೀನಾ ಬೀಚ್ ನಲ್ಲಿಯೇ ಕರುಣಾನಿಧಿ ಅಂತ್ಯಕ್ರಿಯೆಗೆ ಮದ್ರಾಸ್ ಹೈ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಅಣ್ಣಾದೊರೈ, ಎಂಜಿಆರ್ ಹಾಗೂ ಜಯಲಲಿತಾ ಸಮಾಧಿಗಳು ಇರುವ ರಾಜಧಾನಿ ಚೆನ್ನೈನ ಮರೀನಾ ಬೀಚ್ ನಲ್ಲಿ ಅಣ್ಣಾದೊರೈ ಸ್ಮಾರಕದ ಪಕ್ಕದಲ್ಲಿಯೇ ಕರುಣಾನಿಧಿಯವರನ್ನು ಮಣ್ಣು ಮಾಡಬೇಕೆಂದು ಡಿಎಂಕೆ ಪಟ್ಟು ಹಿಡಿದಾಗ, ಕಾನೂನು ತೊಡಕು ಕಾರಣ ಹೇಳಿ ಸರ್ಕಾರ ಅನುಮತಿ ನಿರಾಕರಿಸಿತ್ತು.
ಈ ಬೆಳವಣಿಗೆಗಳ ನಡುವೆ ಕಾನೂನು ವಿಭಾಗ ಹಿಂಸಾಚಾರ ಸಾಧ್ಯತೆಯನ್ನು ಮನಗಂಡು ರಾತ್ರೋರಾತ್ರಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. , ಹೈಕೋರ್ಟ್'ನ ಹಂಗಾಮಿ ನ್ಯಾಯಮೂರ್ತಿ, ಕನ್ನಡಿಗ ಹುಲುವಾಡಿ ಜಿ.ರಮೇಶ್ ಅವರು ಈ ಅರ್ಜಿಯನ್ನು ರಾತ್ರಿ ವಿಚಾರಣೆ ನಡೆಸಲು ಅನುಮತಿ ನೀಡಿದ್ದರು.ಈ ವಿವಾದದ ಕುರಿತು ಮಂಗಳವಾರ ಮಧ್ಯರಾತ್ರಿವರೆಗೂ ವಿಚಾರಣೆ ನಡೆಯಿತಾದರೂ ಯಾವುದೇ ಆದೇಶ ಹೊರಬೀಳದೆ ಬುಧವಾರ ಬೆಳಗ್ಗೆ 8 ಗಂಟೆಗೆ ವಿಚಾರಣೆ ಮುಂದೂಡಿಕೆಯಾಗಿತ್ತು. ವಾದ ವಿವಾದಗಳನ್ನು ಆಲಿಸಿದ ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠ ಇಂದು ಬೆಳಗ್ಗೆ ತೀರ್ಪು ಪ್ರಕಟಿಸಿದ್ದು, ಮರೀನಾ ಬೀಚ್ ನಲ್ಲಿಯೇ ಕರುಣಾನಿಧಿ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನ್ಯಾಯಾಲಯದ ಆದೇಶ ಹಿನ್ನಲೆಯಲ್ಲಿ ಅಣ್ಣಾದೊರೈ ಸಮಾಧಿ ಪಕ್ಕದಲ್ಲಿಯೇ ಕರುಣಾನಿಧಿ ಅಂತ್ಯಕ್ರಿಯೆ ನಡೆಯಲಿದೆ.