ಮಂಗಳೂರು, ಆ 8: ಸುರತ್ಕಲ್ ಟೋಲ್ ಕೇಂದ್ರದ ಟೋಲ್ ಸಂಗ್ರಹ ಗುತ್ತಿಗೆ ಅವಧಿ ಜುಲೈ 30ಕ್ಕೆ ಕೊನೆಗೊಂಡ ಬಳಿಕ ಹೊಸ ಟೆಂಡರ್ ಗೆ ಅವಕಾಶ ನೀಡದೆ ಸ್ಥಗಿತ ಗೊಳಿಸಲಾಗುವುದಾಗಿ ಹೇಳಿದ್ದರೂ, ಮತ್ತೆ ಗುತ್ತಿಗೆ ನವೀಕರಣಗೊಳಿಸಿರುವುದನ್ನು ವಿರೋಧಿಸಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆ. 14ರಂದು ಒಂದು ದಿನ ಸಾಮೂಹಿಕ ಧರಣಿ ನಡೆಸಲಿದೆ ಎಂದು ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಿಯಮ ಬಾಹಿರವಾಗಿ ನಡೆಸಲಾಗುತ್ತಿರುವ ಟೋಲ್ ಸಂಗ್ರಹವನ್ನು ನಿಲ್ಲಿಸುವವರೆಗೆ ಹೋರಾಟ ಮುಂದುವರಿಯಲಿದೆ. ಆ. 14ರಂದು ಬೆಳಗ್ಗೆ 10 ಗಂಟೆಯಿಂದ ಸುರತ್ಕಲ್ ಟೋಲ್ ಕೇಂದ್ರದ ಸಮೀಪ ಒಂದು ದಿನದ ಸಾಮೂಹಿಕ ಧರಣಿ ನಡೆಯಲಿದೆ ಎಂದು ಅವರು ಹೇಳಿದರು. ಈ ನಡುವೆ ಸಂಸದರು ಕೂಡಾ ಗುತ್ತಿಗೆ ಅವಧಿ ಮುಗಿದ ಬಳಿಕ ಟೋಲ್ ಸಂಗ್ರಹಿಸಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಗುತ್ತಿಗೆಯನ್ನು ಮತ್ತೊಂದು ಅವಧಿಗೆ ನಿಯಮಗಳಿಗೆ ವಿರುದ್ಧವಾಗಿ ನವೀಕರಿಸಲಾಗಿದೆ ಎಂದು ಮುನೀರ್ ಕಾಟಿಪಳ್ಳ ಆಕ್ಷೇಪಿಸಿದರು.
ರಾಜ್ಯ ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರ ಸ್ಥಳೀಯ ಕಚೇರಿಯ ಸುರತ್ಕಲ್ ಟೋಲ್ ಕೇಂದ್ರವನ್ನು ಮುಚ್ಚಬಹುದು ಎಂಬ ಪ್ರಸ್ತಾಪವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಿತ್ತು. ಇದಕ್ಕೆ ಪೂರಕವಾಗಿ ತಿಂಗಳ ಹಿಂದೆ ಸಂಸದ ನಳಿನ್ ಕುಮಾರ್ ಕಟೀಲ್ ಕೂಡಾ ಗುತ್ತಿಗೆ ಅವಧಿ ಮುಗಿದ ಅನಂತರ ಟೋಲ್ ಮುಂದುವರಿಯುವುದಿಲ್ಲ ಎನ್ನುವ ಭರವಸೆ ನೀಡಿದ್ದರು. ಅದು ಕೂಡಾ ಸುಳ್ಳಾಗಿದೆ.