ಕಾಸರಗೋಡು, ಅ ೭: ಕೇಂದ್ರ ಸರಕಾರದ ಮೋಟಾರು ವಾಹನ ತಿದ್ದುಪಡಿ ಮಸೂದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸಾರಿಗೆ ನೌಕರರ ಕರೆ ನೀಡಿದ್ದ ಮುಷ್ಕರ ಕಾಸರಗೋಡಿನಲ್ಲಿ ಬಂದ್ ಆಗಿ ಪರಿವರ್ತನೆ ಗೊಂಡಿತು. ಪರಿಣಾಮ ಕೆ ಎಸ್ ಆರ್ ಟಿ ಸಿ ಬಸ್ ಗಳು ಹಾಗೂ ಖಾಸಗಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಪರಿಣಾಮ ಸರಕು ಲಾರಿ, ಆಟೋ - ಟ್ಯಾಕ್ಸಿ ಗಳು ರಸ್ತೆಗಿಳಿದಿರಲಿಲ್ಲ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಜಿಲ್ಲೆಯಲ್ಲಿ ಬಹುತೇಕ ಶಾಲೆಗಳಿಗೆ ರಜೆ ನೀಡಲಾಗಿತ್ತು. ಕೆಲವೇ ಕೆಲ ಖಾಸಗಿ ವಾಹನಗಳು ಮಾತ್ರ ಸಂಚಾರ ನಡೆಸುತ್ತಿದ್ದವು. ಸೋಮವಾರ ಸಿಪಿಎಂ ಕಾರ್ಯಕರ್ತ ಉಪ್ಪಳ ಸೋಂಕಾಲಿನ ಅಬೂಬಕ್ಕರ್ ಸಿದ್ದಿಕ್ ಕೊಲೆ ಖಂಡಿಸಿ ಮಂಜೇಶ್ವರ ತಾಲೂಕಿನಲ್ಲಿ ಹರತಾಳ ನಡೆದಿತ್ತು. ಎರಡನೇ ದಿನವಾದ ಇಂದು ವಾಹನ ಮುಷ್ಕರ ಬಂದ್ ಆಗಿ ಪರಿವರ್ತನೆ ಗೊಂಡಿದ್ದು, ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಎಲ್ಲೆಡೆ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.