ಕುಂದಾಪುರ, ಆ 07: 2014 ರ ಅಕ್ಟೋಬರ್ 13ರಂದು ನಡೆದ ಕುಂದಾಪುರ ಖಾರ್ವಿಕೇರಿಯ ಮೀನುಗಾರ ಪ್ರಮೋದ್ ಖಾರ್ವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳಿಗೂ ಜೀವಾವಧಿ ಶಿಕ್ಷೆಯಾಗಿದೆ. ವ್ಯವಹಾರವೊಂದಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಕುಂದಾಪುರ ನಿವಾಸಿ ಜೀವನ್ ರಾವ್ (32), ಹರ್ಬಟ್ ಬರೆಟ್ಟೊ ಖಾರ್ವಿಕೇರಿ (32), ಜೋಸೆಪ್ ಗಂಗೊಳ್ಳಿ (46) ರೋಶನ್ ಬರೆಟ್ಟೊ (24) ಸೇರಿಕೊಂಡು ಪ್ರಮೋದ್ ಖಾರ್ವಿ ಅವರನ್ನು ಕೊಲೆಗೈದು ನದಿಗೆ ಹಾಕಿದ್ದರು. ಅ.14 ರಂದು ಮೃತದೇಹ ಖಾರ್ವಿಕೇರಿ ನದಿ ತೀರದಲ್ಲಿ ಪತ್ತೆಯಾಗಿದ್ದು, ಪೋಸ್ಟ್ ಮಾರ್ಟಂನಲ್ಲಿ ಮೃತದೇಹದ ಆರು ಕಡೆ ಗಾಯ ಕಂಡು ಬಂದಿತ್ತು. ಇದರಿಂದ ಕೊಲೆ ಎಂಬ ಸಂದೇಹ ವ್ಯಕ್ತವಾಗಿತ್ತು. ಶವವನ್ನು ಕುಂದಾಪುರದ ಶಾಸ್ತ್ರೀವೃತ್ತದಲ್ಲಿ ಇರಿಸಿ ಪ್ರತಿಭಟನೆ ಮಾಡಲಾಗಿತ್ತು. ಇದಾಗಿ ಎರಡು ತಿಂಗಳ ನಂತರ ಆರೋಪಿಗಳ ಬಂಧನ ಮಾಡಲಾಗಿತ್ತು.
ಪ್ರಮೋದ್ ಖಾರ್ವಿ
ಪ್ರಕರಣವನ್ನು ಆಲಿಸಿದ ನ್ಯಾಯಾಲಯ ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳಿಗೆ 302 ಅನ್ವಯ ಜೀವಾವಧಿ ಶಿಕ್ಷೆ, ತಲಾ 40 ಸಾವಿರ ದಂಡ, ಕಲಂ 201ರ ಅನ್ವಯ ಸಾಕ್ಷ್ಯ ನಾಶಕ್ಕೆ ಸಂಬಂಧಿಸಿ 3 ವರ್ಷ ಕಠಿಣ ಸಜೆ, ರೂ.10 ಸಾವಿರ ಜುಲ್ಮನೆ ವಿಧಿಸಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯದೀಶರಾದ ಪ್ರಕಾಶ್ ಖಂಡೇರಿ ತೀರ್ಪು ಪ್ರಕಟಿಸಿದ್ದಾರೆ.ಸರ್ಕಾರಿ ಅಭಿಯೋಜಕರಾದ ಪ್ರಕಾಶ್ಚಂದ್ರ ಶೆಟ್ಟಿ ಆರೋಪಿಗಳ ವಿರುದ್ಧ ವಾದಿಸಿದ್ದರು.
ಪ್ರಕರಣದ ಹಿನ್ನೆಲೆ:
ಕುಂದಾಪುರ ಖಾರ್ವಿಕೇರಿಯ ಪ್ರಮೋದ್ ಕುಮಾರ್ ಸ್ಥಳೀಯವಾಗಿ ಕುಮಾರ್ ಖಾರ್ವಿ ಎಂದೇ ಗುರುತಿಸಿಕೊಂಡಿದ್ದರು. ಅ.14ರಂದು ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಇವರನ್ನು ಸ್ಥಳೀಯರು ನೋಡಿದ್ದರು ಎನ್ನಲಾಗಿದೆ. ಆದರೆ ಮಧ್ಯಾಹ್ನದ ವೇಳೆಗೆ ಆತ ಹೆಣವಾಗಿ ಪತ್ತೆಯಾಗಿತ್ತು. ಪ್ರಾರಂಭದಲ್ಲಿ ಮರಳುಗಾರಿಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿತ್ತು ಎನ್ನಲಾಗಿತ್ತು.
ಸಾವು ಅನುಮಾನಾಸ್ಪದವಾಗಿದೆ ಎನ್ನುವ ಅನುಮಾನದಲ್ಲಿ ಮರಣೋತ್ತರ ಶವ ಪರೀಕ್ಷೆಯನ್ನು ಮಣಿಪಾಲದಲ್ಲಿ ಮಾಡಿಸಲು ಕೊಂಡೊಯ್ಯಲಾಗಿದ್ದು, ಅ.14ರಂದು ಮಧ್ಯಾಹ್ನ ಮೃತದೇಹವನ್ನು ತರುತ್ತಿದ್ದ ಸಂದರ್ಭ ಶವವನ್ನು ಶಾಸ್ತ್ರೀ ವೃತ್ತದಲ್ಲಿ ಇಟ್ಟು ಪ್ರತಿಭಟಿಸಿದರು. ಈ ಸಂದರ್ಭ ಪೊಲೀಸ್ ಉಪನಿರೀಕ್ಷಕರು ಮೃತ ವ್ಯಕ್ತಿಯ ತಾಯಿ ನೀಡಿದ ದೂರು ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದರು. ಆದರೆ ಮಂಗಳವಾರವೇ ಮೃತ ವ್ಯಕ್ತಿಯ ತಂದೆ ದೂರು ನೀಡಿದ್ದು, ಎಫ್.ಐಆರ್ ದಾಖಲಿಸಿಕೊಳ್ಳಲಾಗಿದೆ. ತಾಯಿಯವರ ಹೇಳಿಕೆಯನ್ನೂ ವೀಡಿಯೋ ದಾಖಲಾತಿ ಹಾಗೂ ಕೈ ಬರಹದಲ್ಲಿ ದಾಖಲು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರೂ, ತಾಯಿ ನೀಡಿದ ದೂರಿಗೆ ಯಾವುದೇ ಸ್ವೀಕೃತಿ ಪತ್ರ ನೀಡಿಲ್ಲ ಎಂದು ಆರೋಪಿಸಿ ಅವರ ವಿರುದ್ಧ ದಿಕ್ಕಾರ ಕೂಗಿದ್ದರು. ಸುಮಾರು ಅರ್ಧ ತಾಸುಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಗಂಗೊಳ್ಳಿಯ ಸೆಲಿನಾ ಮಾಲಿಕತ್ವದ ಪ್ಯಾಕ್ಟರಿ ಇದ್ದು, ಅಲ್ಲಿ ಸೋಡಾ ಬಾಟಲಿಗೆ ಸಂಬಂಧಪಟ್ಟಂತೆ ತಕರಾರು ನಡೆದು ಆರೋಪಿಗಳು ಪ್ರಮೋದ್ ಖಾರ್ವಿ ಅವರನ್ನು ಕೊಲೆ ಮಾಡಿದ್ದರು.