ಉಡುಪಿ, ಅ 1: ಕೊರಂಕ್ರಪಾಡಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.
ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು ವಾಸುಕಿ ಸುಬ್ರಹ್ಮಣ್ಯ ದೇವರ ಬೆಳ್ಳಿಯ ಮುಖವಾಡ ಹಾಗೂ ಯಕ್ಷಿಣಿ ದೇವರ ಬೆಳ್ಳಿಯ ಮುಖವಾಡ , ಮುಖ್ಯ ಪ್ರಾಣ ದೇವರ ಬೆಳ್ಳಿಯ ಮಣಿಮಾಲೆ, ಖಡ್ಗೇಶ್ವರಿ ದೇವಿಯ ಐದು ತಾಳಿಯ ಗುಂಡುಗಳಿರುವ ಚಿನ್ನದ ಕರಿಮಣಿ ಸರ ಹಾಗೂ ಬೆಳ್ಳಿಯ ಕವಚ ಇರುವ ಶಂಖವನ್ನು ದೋಚಿ ಪರಾರಿಯಾಗಿದ್ದಾರೆ. ಕಳವಾದ ಸೊತ್ತುಗಳು 4.70 ಕೆಜಿ ತೂಕದ ಬೆಳ್ಳಿಯ ಹಾಗೂ ಸುಮಾರು 2 ಪವನ್ ತೂಕದ ಚಿನ್ನಭಾರಣಗಳ ಒಟ್ಟು ಮೌಲ್ಯ 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ದೇವಸ್ಥಾನದ ಆರ್ಚಕ ಶ್ರೀನಿವಾಸ ಗಾಣಿಗ ಅವರು ಸೆ.28ರಂದು ಸಂಜೆ 7.30 ಗಂಟೆಗೆ ಗರ್ಭಗುಡಿಗೆ ಹಾಗೂ ಸುತ್ತಮುತ್ತಲಿನ ಇತರ ಗುಡಿಗಳಿಗೆ ಬೀಗ ಹಾಕಿ ಹೋಗಿದ್ದರು. ಸೆ.29 ರಂದು ಬೆಳಗ್ಗೆ 6 ಗಂಟೆಗೆ ದೇವಸ್ಥಾನಕ್ಕೆ ಬಂದು ನೋಡುವಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಉಡುಪಿ ನಗರ ಠಾಣೆಯ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಸುಳಿವಿಗೆ ಬಲೆ ಬೀಸಿದ್ದಾರೆ.