ಮಂಗಳೂರು, ಆ 7: ಶೋಲಾಪುರ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 169 ರ ಫಲ್ಗುಣಿ ನದಿಗೆ ಗುರುಪುರದಲ್ಲಿ ಹೊಸ ಸೇತುವೆ ನಿರ್ಮಾಣ ಯೋಜನೆಗೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರ್ಇ ಸಚಿವಾಲಯ 37.84 ಕೋಟಿ ಮಂಜೂರು ಮಾಡಿದೆ.
ಸಂಸದ ನಳಿನ್ಕುಮಾರ್ ಕಟೀಲ್ ಅವರ ಮನವಿ ಮೇರೆಗೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಯೋಜನೆಗೆ ಶಿಫಾರಸು ಮಾಡಿದ್ದರು.ರಾಜ್ಯ ಸರ್ಕಾರ ಕಳುಹಿಸಿದ 38.07 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಪರಿಶೀಲಿಸಿದ ಕೇಂದ್ರ ಸಚಿವಾಲಯ ಅಂತಿಮವಾಗಿ 37.84 ಕೋಟಿ ರೂ.ಮೊತ್ತಕ್ಕೆ ತಾಂತ್ರಿಕ, ಆಡಳಿತಾತ್ಮಕ ಮತ್ತು ಆರ್ಥಿಕ ಮಂಜೂರಾತಿ ನೀಡಿದೆ.2018-19ರಲ್ಲಿ 11.53 ಕೋಟಿ ರೂ.ವೆಚ್ಚದಲ್ಲಿ ಶೇ.30 ಕಾಮಗಾರಿ ಹಾಗೂ 2019-20ರಲ್ಲಿ ಉಳಿದ ಕಾಮಗಾರಿ ಪೂರೈಸಲು ಆದೇಶಿಸಲಾಗಿದೆ. 1932 ರಲ್ಲಿನಿರ್ಮಾಣಗೊಂಡಿರುವ ಈಗಿನ ಸೇತುವೆ ಶಿಥಿಲಗೊಂಡಿದ್ದು, ಇತ್ತೀಚೆಗಷ್ಟೇ ಮುಲ್ಲರಪಟ್ಣ ಸೇತುವೆ ಕುಸಿದ ಬಳಿಕ ವಿಶೇಷ ವಾಹನ ಬಳಸಿ ತಪಾಸಣೆ ನಡೆಸಲಾಗಿತ್ತು. ಸಧ್ಯಕ್ಕೆ ಸೇತುವೆ ಬಳಕೆ ಯೋಗ್ಯ ಎಂಬ ಸಂದೇಶ ಬಂದಿತ್ತು. ಹೊಸ ಸೇತುವೆ 175 ಮೀಟರ್ ಉದ್ದ , 16 ಮೀಟರ್ ಅಗಲ ಇರಲಿದ್ದು , ಇದರಲ್ಲಿ 10 ಮೀಟರ್ ಅಗಲ ವಾಹನ ಸಂಚಾರಕ್ಕೆ ಲಭಿಸಲಿದೆ. ಉಳಿದ ಭಾಗದಲ್ಲಿ ಪಾದಚಾರಿಗಳ ಓಡಾಟಕ್ಕೆ ಎರಡೂ ಬದಿ ಪುಟ್ ಪಾತ್ ನಿರ್ಮಾಣ ಸೇರಿದೆ.